ಬೆಂಗಳೂರು: ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕನ್ನು ಸಂವಿಧಾನದ ವಿಶೇಷ ತಿದ್ದುಪಡಿ ಕಾಯ್ದೆ 371 ಜೆ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸುಪ್ರೀಂಕೋರ್ಟ್ಗೆ ಮನವಿ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
371ಜೆ ವ್ಯಾಪ್ತಿಗೆ ಹರಪ್ಪನಹಳ್ಳಿ: ಇಂದು ಶೂನ್ಯ ವೇಳೆಯಲ್ಲಿ ಶಾಸಕ ಕರುಣಾಕರ ರೆಡ್ಡಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಈ ಮೊದಲು ಹರಪ್ಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ನಂತರ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿತ್ತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸಂವಿಧಾನದ 371ನೇ ಜೆ ಕಾಯ್ದೆಗೆ ತಿದ್ದುಪಡಿ ಮಾಡುವಾಗ ದಾವಣಗೆರೆ ಜಿಲ್ಲೆಯನ್ನು ಪರಿಗಣಿಸಿರಲಿಲ್ಲ. ಗಣಿಗಾರಿಕೆ ನಡೆಯುವ ಜಿಲ್ಲೆಗಳನ್ನು ಹೆಚ್ಚು ಪ್ರಭಾವಿತ ಜಿಲ್ಲೆಗಳೆಂದು ಪರಿಗಣಿಸಿದ್ದರಿಂದ ಹರಪ್ಪನಹಳ್ಳಿ ತಾಲೂಕು ಕೈಬಿಟ್ಟು ಹೋಗಿದೆ. ಇದೀಗ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಲ್ಲು ಗಣಿಗಾರಿಕೆ, ಅದಿರು ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು. ತಾವು ಪುನಃ ಮತ್ತೊಮ್ಮೆ ಇಲಾಖೆಗಳ ಅಧಿಕಾರಿಗಳ ಜೊತೆ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ವಸತಿ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಒದಗಿಸಿಕೊಡಲು ಸರ್ಕಾರ ಬದ್ಧ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿ ವಸತಿ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಒದಗಿಸಿಕೊಡಲು ಸರ್ಕಾರ ಬದ್ಧವಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾಸಭೆಯಲ್ಲಿ ಇಂದು ಶಾಸಕ ದೊಡ್ಡನಗೌಡ ಸಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದರು.
ಹುನಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ. ಬೇಡಿಕೆಗೆ ಅನುಗುಣವಾಗಿ ನಾವು ಜಮೀನು ನೀಡಲು ಸಿದ್ಧರಿದ್ದೇವೆ. ಇದಕ್ಕೆ ಕಾನೂನು ತೊಡಕುಗಳು ಎದುರಾಗುತ್ತವೆ. ಇದಕ್ಕೆ ಶಾಸಕರು ಕೂಡ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.