ಬೆಂಗಳೂರು: ಸರ್ಕಾರದ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ. ನೆಹರೂ ದೇಶ ವಿಭಜನೆಗೆ ಕಾರಣರಾದವರು, ಮಹಾತ್ಮ ಗಾಂಧಿಯವರ ಮಾತನ್ನೇ ನೆಹರು ಕೇಳಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜಿಸಿ ಅಂತ ಗಾಂಧೀಜಿ ಹೇಳಿದ್ದರು. ಆದರೆ, ನೆಹರು ಕಾಂಗ್ರೆಸ್ ವಿಸರ್ಜಿಸಲಿಲ್ಲ. ಹಾಗಾಗಿ ನಾವು ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನೆಹರು ಫೋಟೋವನ್ನು ಪತ್ರಿಕೆಯಲ್ಲಿ ನೀಡಿದ ಸರ್ಕಾರಿ ಜಾಹೀರಾತಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈ ಬಿಟ್ಟಿದ್ದೇವೆ, ದೇಶ ವಿಭಜನೆಯ ಕರಾಳ ನೆನಪು ಅಂತ ಆಚರಣೆ ಮಾಡುತ್ತಿದ್ದೇವೆ. ಗಾಂಧೀಜಿಯವರ ಮಾತನ್ನು ನೆಹರು ಕೇಳಲಿಲ್ಲ, ಮಹಾತ್ಮ ಗಾಂಧೀಜಿಯವರ ಮಾತನ್ನು ಕೇಳದೆ, ದೇಶ ವಿಭಜನೆಗೆ ಕಾರಣವಾಗಿರುವ ನೆಹರೂರವರ ಫೋಟೋವನ್ನು ನಾವು ಹಾಕಲ್ಲ ಎಂದು ಸಮರ್ಥನೆ ನೀಡಿದರು.
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ: ಟಿಪ್ಪು ಅನೇಕ ದೇವಾಲಯಗಳನ್ನು ಧ್ವಂಸ ಮಾಡಿದಾತ, ಲಕ್ಷಾಂತರ ಜನರನ್ನು ಮತಾಂತರ ಮಾಡಿದವ, ಮಹಿಳೆಯರ ಕಗ್ಗೊಲೆ ಮಾಡಿದವನು. ಧರ್ಮದ್ರೋಹಿ ಟಿಪ್ಪು ಭಾವಚಿತ್ರವನ್ನು ಕಾಂಗ್ರೆಸ್ನವರು ಯಾಕೆ ಹಾಕಿದ್ದಾರೆ? ಇದು ಬಹಳ ವಿಚಿತ್ರ ವಿಷಯ ಎಂದು ಕಾಂಗ್ರೆಸ್ ನಡೆಯನ್ನು ರವಿಕುಮಾರ್ ಟೀಕಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್ ಕೈಗೊಂಬೆ ಎನ್ನುವ ಕಾಂಗ್ರೆಸ್ ಆರೋಪ ತಳ್ಳಿಹಾಕಿದ ರವಿಕುಮಾರ್, ಸಿದ್ದರಾಮಯ್ಯ ಅಧಿಕಾರವನ್ನು ಪಡೆಯುವುದಕ್ಕೆ ಸೋನಿಯಾ ಗಾಂಧಿಯವರ ಕೈಗೊಂಬೆಯಾಗಿದ್ದಾರೆ. ರಾಹುಲ್ ಗಾಂಧಿಯವರು ಇಬ್ಬರು ಅಪ್ಪಿಕೊಳ್ಳಿ ಅಂತ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ಗೆ ಹೇಳಿದ್ರು ಅಲ್ವಾ. ಅವರು ಕೂರಿ ಅಂದರೆ ಕೂರಬೇಕು, ಅಪ್ಪಿಕೊಳ್ಳಿ ಅಂದರೆ ಅಪ್ಪಿಕೊಳ್ಳಬೇಕು ಅಂತಹ ದೌರ್ಭಾಗ್ಯದ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿದೆ ಎಂದು ಲೇವಡಿ ಮಾಡಿದರು.