ಬೆಂಗಳೂರು:2008ರಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದ್ದರೂ ನಮ್ಮದೇ ಆದ ಗೊಂದಲ, ತಪ್ಪುಗಳಿಂದ ಹತ್ತು ವರ್ಷಗಳಲ್ಲಿ ನಾವು ತಲುಪಬೇಕಾದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.
ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಚಟುವಟಿಕೆಗೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2011ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಉದ್ಘಾಟನೆಯಾಯಿತು. ಆದರೆ, ಕನ್ನಡ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನ (CIIL)ನ ಒಂದು ಉಪ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಶಾಸ್ತ್ರೀಯ ಭಾಷೆಗೆ ಕೇಂದ್ರ ಸರ್ಕಾರವು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಭಾಷಾ ನೀತಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವಿಕಾಸಕ್ಕೆ ಮಾತೃ ಭಾಷೆಯೇ ಸೂಕ್ತ. ಆದರೆ ಮಾತೃ ಭಾಷಾ ಶಿಕ್ಷಣ ಕಡ್ಡಾಯ ಪ್ರವಾಹದ ವಿರುದ್ಧ ಈಜಿದಂತೆ. ಇದರ ಬಗ್ಗೆ ದೊಡ್ಡ ಚರ್ಚೆಯಾಗಬೇಕು. ಕನ್ನಡ ಶಾಲೆಗಳ ಜತೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವ ಹಿಂದಿನ ಸರ್ಕಾರದ ಯೋಜನೆ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಮೈಸೂರು ವಿವಿಯಲ್ಲಿ ಐದು ಎಕರೆ ಮತ್ತು ಬೆಂಗಳೂರಿನ ಕಲಾ ಗ್ರಾಮದಲ್ಲಿ ಮೂರು ಎಕರೆ ಜಮೀನು ಗುರುತಿಸಲಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಬೇಕು. 2011ರಿಂದ ಈವರೆಗೆ ಹತ್ತು ಕೋಟಿ ರೂ. ಬಂದಿದೆ. ಇಲ್ಲಿಯವರಗೆ ಸಂಶೋಧನೆ ಮತ್ತು ಸಿಬ್ಬಂದಿಯ ವೇತನ ಮತ್ತು ನಿರ್ವಹಣೆಗೆ ಇದು ಬಳಕೆಯಾಗುತ್ತಿದೆ. ನವೆಂಬರ್ 1ರ ಒಳಗಾಗಿ ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನ ಬಳಕೆಗೆ ಬೇಕಾದ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.