ಬೆಂಗಳೂರು: ನಾವು ಆಪರೇಷನ್ ಕಮಲಕ್ಕೆ ಒಳಗಾಗುವ ಚಾನ್ಸೇ ಇಲ್ಲ. ಅದರಿಂದ ಪ್ರಭಾವಿತರೂ ಆಗಿಲ್ಲ, ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ ಎಂದು ಶಾಸಕ ಹಾಗೂ ನಿರ್ಗಮಿತ ಜೆಡಿಎಸ್ ಅಧ್ಯಕ್ಷರಾಗಿದ್ದ ಹೆಚ್ ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.
ಸ್ಪೀಕರ್ ಕಚೇರಿ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಾತನಾಡಿದ ಅವರು ಈ ಸ್ಪಷ್ಟನೆ ನೀಡಿದ್ದಾರೆ. ರಾಜ್ಯಪಾಲರ ಭೇಟಿ ವೇಳೆ, ನಮ್ಮ ರಾಜೀನಾಮೆ ಪತ್ರ ಅಗೀಕಾರ ಮಾಡುವಂತೆ ತಿಳಿಸಿದ್ದೇವೆ. ಮೈತ್ರಿ ಸರ್ಕಾರ ಜನರ ಆಕಾಂಕ್ಷೆಗಳಿಗೆ ತಲುಪುವಲ್ಲಿ ಸರ್ಕಾರ ವಿಫಲಗೊಂಡಿದೆ. ಹೀಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಹೆಚ್ ವಿಶ್ವನಾಥ್ ಸುದ್ದಿಗೋಷ್ಠಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರಿಗೆ ಪತ್ರ ಸಹ ಬರೆದಿದ್ದು, ಅವರು ಮಂಗಳವಾರ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದೇವೆ. ನಾವೆಲ್ಲರು ಒಗ್ಗಟ್ಟಿನಿಂದ ರಾಜೀನಾಮೆ ನೀಡಿದ್ದು, ಇದರಲ್ಲಿ ಬೇರೆ ಯಾವುದೇ ಪಕ್ಷದ ಮುಖಂಡರ ಕೈವಾಡವಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
ಯಾರೆಲ್ಲ ರಾಜೀನಾಮೆ
ಮಹೇಶ್ ಕುಮಟಳ್ಳಿ, ಬಿಸಿ ಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಹೆಚ್.ವಿಶ್ವನಾಥ್, ಗೋಪಾಲಯ್ಯ,ಬೈರತಿ ಬಸವರಾಜ್, ನಾರಾಯಣಗೌಡ, ಮುನಿರತ್ನ, ಎಸ್ಟಿ ಸೋಮಶೇಖರ್, ಪ್ರತಾಪ್ ಗೌಡ, ಆನಂದ್ ಸಿಂಗ್ ಸೇರಿದಂತೆ 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.