ಬೆಂಗಳೂರು: ಪ್ರತಿಭಾವಂತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ಸ್ಟಾರ್ಟಪ್ ಸಿಲಿಕ್ಯಾನ್ ವ್ಯಾಲಿ ಬ್ರಿಡ್ಜ್ ರಚನೆ ಮಾಡಲಾಗುವುದು ಎಂದು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ(Minister Ashwatha Narayana) ಪ್ರಕಟಿಸಿದರು.
ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆದು ಸಂಪನ್ನಗೊಂಡ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಐಟಿ ಬಿಟಿ ಅಷ್ಟೇ ಅಲ್ಲದೇ ಇತರೆ ಉದ್ಯಮಗಳ ಸ್ಥಾಪನೆಗೆ ಉದ್ಯಮಿಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವನ್ನು ಸ್ಟಾರ್ಟಪ್ ಸಿಲಿಕಾನ್ ವ್ಯಾಲಿ ಬ್ರಿಡ್ಜ್ ಸ್ಥಾಪನೆ (launching a silicon valley talent bridge) ಮೂಲಕ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಾಗುವುದು. ಈ ಮೂಲಕ ಅಮೆರಿಕದಲ್ಲಿರುವ ಸ್ಟಾರ್ಟಪ್‌ಗಳಿಗೆ ಇಲ್ಲಿನ ಪ್ರತಿಭಾನ್ವಿತ ತಂತ್ರಜ್ಞರು ಇಲ್ಲಿಂದಲೇ ಕೆಲಸ ಮಾಡುವುದಷ್ಟೇ ಅಲ್ಲದೆ ಆ ಕಂಪನಿಗಳಲ್ಲಿ ಷೇರು ಸಹ ಪಡೆಯುವ ವ್ಯವಸ್ಥೆ ರೂಪಿಸಲು ಎಲ್ಲಾ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.
ಅಮೆರಿಕದಲ್ಲಿರುವ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ನಿಪುಣ ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ 'ಸ್ಟಾರ್ಟಪ್ ಸಿಲಿಕಾನ್ ವ್ಯಾಲಿ ಕಾರ್ಯಪಡೆ' ರಚಿಸಲಾಗುವುದು. ಇದರಿಂದ ರಾಜ್ಯದ ಯುವ ಜನತೆಗೆ ಉತ್ತಮ ಉದ್ಯೋಗಾವಕಾಶ ದೊರೆಯುವುದರ ಮೂಲಕ ಅವರ ಆದಾಯ ವೃದ್ಧಿಯಾಗುತ್ತದೆ. ಜೊತೆಗೆ ಅಮೆರಿಕದಲ್ಲಿರುವ ಉದ್ಯಮ ಆಲೋಚನೆ ಹಾಗೂ ಪರಿಕಲ್ಪನೆಗಳು ಭಾರತಕ್ಕೆ ವರ್ಗಾವಣೆಯಾಗಲು ಸಹಕಾರಿಯಾಗುತ್ತದೆ. ಇದರಿಂದ ನಾವು ಜಾಗತಿಕವಾಗಿ ಇನ್ನಷ್ಟು ಬೆಳೆಯಲು ಅನುಕೂಲವಾಗಲಿದೆ ಎಂದು ವಿವರಿಸಿದರು.
ಬಿಯಾಂಡ್ ಬೆಂಗಳೂರು:
ಬೆಂಗಳೂರಿನಾಚೆಗೂ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ 'ಬಿಯಾಂಡ್ ಸ್ಟಾರ್ಟಪ್ ಗ್ರಿಡ್' ಅನ್ನು ಹುಬ್ಬಳ್ಳಿ, ಮೈಸೂರು, ಮಂಗಳೂರು ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತುಕೊಡಲಾಗಿದ್ದು, ಅದಕ್ಕೆ ಬೇಕಿರುವ ಅಗತ್ಯ ಪ್ರೋತ್ಸಾಹಧನ, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಆದ್ಯತೆಯೂ ಇದೇ ಆಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕಂಪನಿಗಳು ಬೆಂಗಳೂರಿನಾಚೆಗೂ ಉದ್ಯಮ ಸ್ಥಾಪನೆಗೆ ಒಲವು ತೋರಿವೆ. ಮಹಿಳಾ ಉದ್ಯಮಶೀಲತೆ ಮೇಲೂ ಬೆಳೆಕು ಹರಿಸಲಾಗಿದ ಎಂದರು.
ಮಂಗಳೂರಿನಲ್ಲಿ ಫಿನ್‌ಟೆಕ್ ಬ್ಯಾಕ್ ಕಚೇರಿ:
ಸ್ಮಾರ್ಟ್ ಫೋನ್ ಮೂಲಕ ಪಾವತಿ ಸೇವೆ ಸೇರಿದಂತೆ ಹಣಕಾಸಿಗೆ ಸಂಬಂಧಿಸಿದಂತೆ ಹತ್ತು ಹಲವು ಸೇವೆಗಳನ್ನು ಒದಗಿಸುತ್ತಿರುವ ಹಣಕಾಸು ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಾಧನೆ ಮಾಡಿದೆ. ಫಿನ್‌ಟೆಕ್ ಕಂಪನಿಗಳು, ಅದರಲ್ಲೂ ಸ್ಟಾರ್ಟಪ್‌ಗಳು ಹೆಚ್ಚು ಹೆಚ್ಚು ಬೆಳೆಯುತ್ತಿದ್ದು, ಫಿನ್‌ಟೆಕ್ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರಿನಲ್ಲಿ ಫಿನ್‌ಟೆಕ್ ಉತ್ಕೃಷ್ಠತಾ ಕೇಂದ್ರವನ್ನು ತೆರೆದು ಅಲ್ಲಿ ಫಿನ್‌ಟೆಕ್ ಬ್ಯಾಕ್ ಆಫೀಸ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.