ಬೆಂಗಳೂರು:3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ನ್ನು ಜುಲೈನಲ್ಲಿ ಮಂಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ 3.10 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಲಾಗಿದೆ. ಜುಲೈನಲ್ಲಿ 3.25 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಲಿದ್ದೇವೆ. ಅಂದಾಜು 15,000 ಕೋಟಿ ರೂ. ಆದಾಯ ಸಂಗ್ರಹ ಹೆಚ್ಚಿಸಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.
ಮೂರು ದಿನ ಸೋಮವಾರ, ಮಂಗಳವಾರ, ಬುಧವಾರ ವಿಶೇಷ ಅಧಿವೇಶನ ಕರೆಯಲಿದ್ದೇವೆ. ವಿಶೇಷ ಅಧಿವೇಶನದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆ ಅಧಿವೇಶನದಲ್ಲಿ ಸ್ಪೀಕರ್ ಅವರನ್ನು ಆಯ್ಕೆ ಮಾಡಲಿದ್ದೇವೆ. ಆರ್.ವಿ ದೇಶಪಾಂಡೆಗೆ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುತ್ತೇವೆ ಎಂದರು. ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿದ್ದೇವೆ. ಆ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವ ಭರವಸೆ ಅಲ್ಲ. ಐದು ವರ್ಷದಲ್ಲಿ ಈಡೇರಿಸುವ ಭರವಸೆ ಆಗಿದೆ ಎಂದರು.
ಅದರಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ಆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಕೊಟ್ಟ ಮಾತಿನಂತೆ ನಡೆದಿದ್ದೆವು. ವಿರೋಧ ಪಕ್ಷ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ರಾಜ್ಯ ದಿವಾಳಿ ಆಗುತ್ತೆ, ಸಾಲಗಾರರ ರಾಜ್ಯ ಎಂದು ಟೀಕೆ ಮಾಡಿದ್ದರು. ಪ್ರಧಾನಿ ಮೋದಿಯೂ ತಮ್ಮ ಮನ್ ಕೀ ಬಾತ್ನಲ್ಲಿ ಉಚಿತಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದಿದ್ದರು. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಇತರ ಬಿಜೆಪಿ ನಾಯಕರು ಈ ಗ್ಯಾರಂಟಿ ಆಗಲ್ಲ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದರು.