ಶಿವಮೊಗ್ಗ:ಫೆ. 20ರ ರಾತ್ರಿ 9 ಗಂಟೆಗೆ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವನ್ನು, ನಾವು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹರ್ಷ ಕೊಲೆ ಪ್ರಕರಣದಲ್ಲಿ ಈಗ ದಸ್ತಗಿರಿ ಮಾಡಿರುವವರ ಬಗ್ಗೆ ನಮ್ಮ ಎಸ್ಪಿ ಅವರು ಮಾಹಿತಿ ನೀಡುತ್ತಾರೆ. ಕೊಲೆಯನ್ನು ಯಾರು ಮಾಡಿದ್ದಾರೆ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರ ಬಳಿ ಇದೆ. ಆರೋಪಿಗಳನ್ನು ಬಂಧಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.
ಈಗ ಬಂಧಿತ ಆರೋಪಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಒಬ್ಬರು ಒಂದೊಂದು ರೀತಿಯ ಮಾಹಿತಿಯನ್ನು ನೀಡುತ್ತಿದ್ದಾರೆ. ಅದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ನಿನ್ನೆ ನಡೆದ ಮೆರವಣಿಗೆಯ ವೇಳೆ ಹಾನಿಗೊಳಗಾದ ವಸ್ತುಗಳ ಮಾಲೀಕರ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಮೂರು ಎಫ್ಐಆರ್ ದಾಖಲಾಗಿವೆ. ನಿನ್ನೆ 14 ಘಟನೆಗಳನ್ನು ನಾವು ಲಿಸ್ಟ್ ಮಾಡಿದ್ದೇವೆ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಹರ್ಷನ ಕೊಲೆ ಆರೋಪಿಗಳು ಹಿಂದೆ ನಡೆದ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಟೋ ಹಾಗೂ ಎರಡು ಬೈಕ್ಗಳನ್ನು ಸುಟ್ಟು ಹಾಕಲಾಗಿದೆ. ನಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಘಟನೆ ಮರುಕಳಿಸದಂತೆ ಕ್ರಮ ಜರುಗಿಸುತ್ತೇವೆ. ರಾಜಕಾರಣಿಗಳ ಹೇಳಿಕೆಯಿಂದ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್ ರೆಡ್ಡಿ ಇದನ್ನೂ ಓದಿ:ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ : ಹರ್ಷ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ
ಮೊನ್ನೆ ನಡೆದ ಕೊಲೆಯಿಂದ ಶಿವಮೊಗ್ಗ ನಗರ ಪ್ರಕ್ಷುಬ್ಧವಾಗಿತ್ತು. ಕೊಲೆ ನಂತರ ನಡೆದ ಘಟನೆಯ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಎಡಿಜಿಪಿ ಮುರುಗನ್ ಹಾಗೂ ಪೂರ್ವ ವಲಯದ ಪ್ರಭಾರ ಐಜಿಪಿ ತ್ಯಾಗರಾಜನ್ ಅವರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಜೊತೆಗೆ ಜಿಲ್ಲೆ ಅಲ್ಲದೆ ಬೇರೆ ಜಿಲ್ಲೆಯ ಪೊಲೀಸರ ನಿಯೋಜನೆ ಜೊತೆಗೆ ಆರ್ಎಎಫ್ ನಿಯೋಜನೆ ಮಾಡಲಾಗಿದೆ. ಘಟನೆಯ ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಗುರುತಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.