ಬೆಂಗಳೂರು:ಜಗತ್ತಿನ ಮುಂಚೂಣಿ ನಗರಗಳಲ್ಲಿ ಬೆಂಗಳೂರು ಒಂದು. ಉದ್ಯೋಗ, ನವೋದ್ಯಮಗಳನ್ನು ಸೃಷ್ಟಿಸುವ ನಗರವೂ ಆಗಿದೆ. ಈ ನಗರಿಯ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ಕನ್ನಡದಲ್ಲಿ ಮಾತು: ಕೊಮ್ಮಘಟ್ಟದಲ್ಲಿ ಉಪನಗರ ರೈಲ್ವೇ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಕನ್ನಡದಲ್ಲೇ ಮೋದಿ ಮಾತು ಆರಂಭಿಸಿದರು. "ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಬೆಂಗಳೂರಿನ ಮಹಾಜನತೆಗೆ ವಿಶೇಷ ನಮಸ್ಕಾರಗಳು. ಇಂದು ಮಹತ್ವದ ದಿನವಾಗಿದೆ. ಕರ್ನಾಟಕದಲ್ಲಿ ಹಲವು ಮೂಲಭೂತ ಯೋಜನೆಗಳನ್ನು ಕಲ್ಪಿಸುವ ಯೋಜನೆಗಳಿಗೆ ಚಾಲನೆ ಕೊಟ್ಟಿರುವುದು ನಮಗೆ ಸಂತೋಷ ತಂದಿದೆ" ಎಂದು ಹೇಳುವ ಮೂಲಕ ಕನ್ನಡಿಗರ ಮನಗೆಲ್ಲುವ ಪ್ರಯತ್ನ ಮಾಡಿದರು.
ಇಲ್ಲಿಗೆ ಬರುವ ಮೊದಲು ಐಐಎಸ್‌ಸಿ, ಬೇಸ್ ವಿವಿಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಇದು ಕೊನೆಯ ಕಾರ್ಯಕ್ರಮ, ಇಲ್ಲಿಂದ ಮೈಸೂರಿಗೆ ಹೋಗುತ್ತೇನೆ. ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ 33 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದು, ಮೊದಲ ದಿನವಾದ ಇಂದು 27 ಸಾವಿರ ಕೋಟಿ ವೆಚ್ಚದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಆಗಿದೆ. ಹಲವು ಯೋಜನೆಗಳ ಮೂಲಕ ಜನರ ಸೇವೆಗೆ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಐದು ನ್ಯಾಷನಲ್ ಹೈವೇ ಯೋಜನೆಗಳು, ಏಳು ರೈಲು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಲಕ್ಷಾಂತರ ಕನಸುಗಳ ವಿಕಾಸ:ಬೆಂಗಳೂರು ಲಕ್ಷಾಂತರ ಜನರಿಗೆ ಕನಸಿನ ನಗರಿಯಾಗಿದೆ. ಬೆಂಗಳೂರಿನ ಅಭಿವೃದ್ಧಿಯಿಂದ ಲಕ್ಷಾಂತರ ಕನಸುಗಳ ವಿಕಾಸವಾಗಲಿದೆ. ಹಾಗಾಗಿ ಕೇಂದ್ರದಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಕೊಡಲಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಹಲವು ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಕೊಡುವ ಕೆಲಸವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದರು.
ಇದನ್ನೂ ಓದಿ:ಕೊಮ್ಮಘಟ್ಟದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಮೋದಿ
ಸಬರ್ಬನ್ ಯೋಜನೆ ಬಗ್ಗೆ 40 ವರ್ಷದಿಂದ ಚರ್ಚೆ ಮಾತ್ರ ನಡೆಯುತ್ತಿತ್ತು. ನಾವು ಈಗ ನಿಮ್ಮ ಕನಸನ್ನು ನನಸು ಮಾಡಿದ್ದೇವೆ. ಹದಿನಾರು ವರ್ಷದವರೆಗೆ ಸಬರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧ. ನಲವತ್ತು ವರ್ಷ ಚರ್ಚೆಯಲ್ಲಿದ್ದ ಈ ಯೋಜನೆ ಆರಂಭಿಸುವ ಪುಣ್ಯ ನಮಗೆ ಸಿಕ್ಕಿದೆ. ಸಬರ್ಬನ್ ರೈಲು ಯೋಜನೆ ರೀತಿಯೇ ಬೆಂಗಳೂರು ರಿಂಗ್ ರಸ್ತೆ ಅಗಲೀಕರಣ ಯೋಜನೆ ಮಾಡಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಕಮ್ಮಿ ಆಗಲಿದೆ ಎಂದು ಹೇಳಿದರು.
ಬೊಮ್ಮಾಯಿ ಆಡಳಿತಕ್ಕೆ ಶ್ಲಾಘನೆ: ಕರ್ನಾಟಕದಲ್ಲಿ 1,200 ಕಿ.ಮೀ ಗೂ ಹೆಚ್ಚಿನವರೆಗೆ ವಿವಿಧ ರೈಲು ಕಾಮಗಾರಿ ಮಾಡಲಾಗಿದೆ. ಕೊರೊನಾ ವೇಳೆ ಬೆಂಗಳೂರಿನಲ್ಲಿ ಇರುವ ನಮ್ಮ ಯುವ ಸಮೂಹ ಉತ್ತಮ ಸೇವಕಾರ್ಯ ಮಾಡಿದೆ. ಬೆಂಗಳೂರಿಗೆ ಜನರ ಮನಸ್ಥಿತಿ ಬದಲಾಯಿಸುವ ಶಕ್ತಿ ಇದೆ. ಜಗತ್ತಿನ ಮುಂಚೂಣಿ ನಗರಗಳಲ್ಲಿ ಬೆಂಗಳೂರು ಒಂದು. ಉದ್ಯೋಗ, ನವ್ಯೋದ್ಯಮಗಳ ಸೃಷ್ಟಿ ಮಾಡುವ ನಗರವಾಗಿದೆ ಎನ್ನುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ಹೊಗಳಿದರು. ಅಲ್ಲದೇ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ವಿಕಾಸ ಆಗುತ್ತಿದೆ ಎಂದು ಬೊಮ್ಮಾಯಿ ಆಡಳಿತಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.