ಬೆಂಗಳೂರು: ಕನ್ನಡಿಗರ ಸ್ವಾಭಿಮಾನ, ಗೌರವ ಮತ್ತು ಉದ್ಯೋಗಾವಕಾಶಗಳಿಗೆ ಧಕ್ಕೆ ಬರದಂತೆ ಎಚ್ಚರ ವಹಿಸುವುದರ ಜೊತೆಗೆ ಇತರರಿಗೂ ಅವಕಾಶಗಳನ್ನು ಕಲ್ಪಿಸಲು ನಾವು ಸಿದ್ದರಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 73 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜರೋಹಣದ ಬಳಿಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಅವರು, ಹೊರ ರಾಜ್ಯ ಹಾಗೂ ದೇಶಗಳಿಂದ ಬಂದು ರಾಜ್ಯದಲ್ಲಿ ನೆಲೆಸಿರುವ ಜನರು ಇಲ್ಲಿನ ಭಾಷೆ ಸಂಸ್ಕೃತಿ ಮತ್ತು ಜೀವನ ವಿಧಾನಗಳಿಗೆ ಹೊಂದಿಕೊಂಡು ಕನ್ನಡತನವನ್ನು ಗೌರವಿಸುವದಲ್ಲದೆ ತಮ್ಮತನವನ್ನು ಉಳಿಸಿಕೊಳ್ಳಿ ಎಂದು ಕರೆ ನೀಡಿದರು. ಈ ವಿಚಾರದಲ್ಲಿ ಕನ್ನಡಿಗರು ಇತರರಿಗೆ ಮಾದರಿಯಾಗಿದ್ದಾರೆ. ಕನ್ನಡಿಗರು ನಿಂತ ನೆಲ ಮತ್ತು ಅಲ್ಲಿನ ಜನರ ಜೊತೆ ಹೊಂದಿಕೊಂಡು ಬಾಳುತ್ತಿದ್ದಾರೆ. ಇದು ಎಲ್ಲರಿಗೂ ಅನುಕರಣೀಯ ಮಾದರಿಯಾಗಿದೆ. ಕರ್ನಾಟಕ ರಾಜ್ಯ ಜನರು ಅತಿವೃಷ್ಟಿ-ಅನಾವೃಷ್ಟಿಗಳ ಅಡಕತ್ತರಿಯಲ್ಲಿ ಸಿಲುಕಿದ್ದು, ಎರಡು ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಲವತ್ತೈದು ವರ್ಷಗಳಲ್ಲಿ ಕಂಡರಿಯದ ಪ್ರಕೃತಿ ವಿಕೋಪ ಎದುರಾಗಿದೆ. 22 ಜಿಲ್ಲೆಗಳ ವ್ಯಾಪ್ತಿಯಲ್ಲಿ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಿಂದ 61 ಮಂದಿ ಈವರೆಗೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ 48 ಗಂಟೆಗಳ ಒಳಗಾಗಿ 5 ಲಕ್ಷ ರೂಗಳಂತೆ ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರಿಗೆ ತಕ್ಷಣಕ್ಕೆ 10 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ, ಮನೆ ದುರಸ್ತಿಗೆ 1 ಲಕ್ಷ ನೆರವು ಘೋಷಣೆ ಮಾಡಿದ್ದೇನೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇನೆ. ವೈಮಾನಿಕ ಸಮೀಕ್ಷೆ ಹಾಗೂ ಸ್ಥಳ ಪರೀಕ್ಷೆಗಳನ್ನು ಮಾಡಿ ಸಂತ್ರಸ್ತರಿಗೆ ತಡವಿಲ್ಲದೇ ಪರಿಹಾರ ಒದಗಿಸಲು ಪ್ರಯತ್ನಿಸಿದ್ದೇನೆ ಎಂದು ನೆರೆಹಾನಿ ಪರಿಹಾರ ಕಾರ್ಯಾಚರಣೆ ಕುರಿತು ಪ್ರಸ್ತಾಪಿಸಿದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೂರು ವಾರವಾಗಿದೆ. ರಾಜ್ಯಬರ ಮತ್ತು ಭಾರೀ ಪ್ರವಾಹದಿಂದ ತತ್ತರಿಸಿದೆ. ನಾನು ನೀವೆಲ್ಲರೂ ಜೊತೆಗೂಡಿ ಸಂತ್ರಸ್ತರ ನೆರವಿಗೆ ನಿಲ್ಲೋಣ. ನೆರೆಹಾನಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಕ್ಷಣ ಸ್ಪಂಧಿಸಿದೆ. ಸೇನಾ ವಿಪತ್ತು ನಿರ್ವಹಣಾ ಪಡೆ, ಸೇನಾ ಹೆಲಿಕ್ಯಾಪ್ಟರ್, ರಕ್ಷಣಾ ದೋಣಿಗಳ ಸೌಲಭ್ಯ ಒದಗಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸದಾನಂದಗೌಡ, ಪ್ರಹ್ಲಾದ್ ಜೋಷಿ ಭೇಟಿ ನೀಡಿ ಹೆಚ್ಚಿನ ಪರಿಹಾರದ ಭರವಸೆ ನೀಡಿದ್ದಾರೆ. ನೆರೆಹಾನಿ ವರದಿ ಪಡೆದು ಹೆಚ್ಚಿನ ನೆರವಿಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.