ಕರ್ನಾಟಕ

karnataka

ETV Bharat / state

ಶೇ.80ರಷ್ಟು ವ್ಯಾಕ್ಸಿನೇಷನ್ ಮಾಡಿ.. ಸರ್ಕಾರಕ್ಕೆ ಮೂರು ತಿಂಗಳ ಡೆಡ್​ಲೈನ್​ ನೀಡಿದ್ರು ಡಿಕೆಶಿ - KPCC President D.K.Shivakumar

ಕೋವಿಡ್ 3 ನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಲು ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಕೆಶಿ
ಡಿಕೆಶಿ

By

Published : Jul 4, 2021, 2:20 PM IST

ಬೆಂಗಳೂರು: ಮೂರು ತಿಂಗಳೊಳಗೆ ಶೇಕಡಾ 80 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ಹಾಕಿಸಿ, ಕೋವಿಡ್ 3 ನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಲು ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮೂರು ತಿಂಗಳೊಳಗೆ ರಾಜ್ಯದ ಶೇ.80 ರಷ್ಟು ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿದರೆ, ಕೊರೊನಾ 3 ನೇ ಅಲೆಯಿಂದ ರಾಜ್ಯವನ್ನು ರಕ್ಷಿಸಬಹುದಾಗಿದೆ. ಅಕ್ಟೋಬರ್​ನಲ್ಲಿ ಕೊರೊನಾ 3ನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಶೇ.80 ರಷ್ಟು ವಯಸ್ಕರಿಗೆ ಸೆಪ್ಟೆಂಬರ್ 30 ರೊಳಗೆ ಎರಡು ಡೋಸ್ ಲಸಿಕೆ ನೀಡಿದರೆ 3ನೇ ಅಲೆಯಿಂದ ರಕ್ಷಣೆ ಪಡೆಯಬಹುದು ಮತ್ತು ಅದರ ತೀವ್ರತೆ ತಡೆಯಬಹುದು. ಅದಕ್ಕಾಗಿಯೇ ಈ ಸವಾಲಿಗೆ ಸರ್ಕಾರ ಸಿದ್ಧವಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ತೀವ್ರತೆ ತಗ್ಗದು
'ವ್ಯಾಕ್ಸಿನೇಷನ್ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ರಾಜ್ಯ ಸರ್ಕಾರ ಈವರೆಗೆ ಶೇ. 8ರಷ್ಟು ಜನರಿಗೆ ಮಾತ್ರವೇ ಲಸಿಕೆ ನೀಡಿದೆ. ಕೇವಲ ಒಂದು ಡೋಸ್ ಲಸಿಕೆ ಹಾಕಿದರೆ ಕೋವಿಡ್ ತೀವ್ರತೆಯನ್ನು ತಗ್ಗಿಸಲಾಗದು. ಕೊರೊನಾದಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದಿರಬೇಕು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಶೇ.80 ರಷ್ಟು ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, 3ನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ. ಈ ಸವಾಲು ಅಸಾಧ್ಯವಾದುದೇನೂ ಅಲ್ಲ. ವಿದೇಶಗಳಿಗೆ ಲಸಿಕೆ ಕಳಿಸುವುದನ್ನು ತಗ್ಗಿಸಿ ನಮ್ಮ ಜನರಿಗೆ ವ್ಯಾಕ್ಸಿನೇಷನ್‌ ಮಾಡಲು ಒತ್ತು ಕೊಡಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಮಲತಾಯಿ ಧೋರಣೆ
ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವ್ಯಾಕ್ಸಿನೇಷನ್ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ಹಾಕುವಲ್ಲಿ ಉತ್ತರ ಕರ್ನಾಟಕದ ಜನರನ್ನು ಮಲತಾಯಿ ಮಕ್ಕಳಂತೆ ನೋಡಲಾಗುತ್ತಿದೆ. ಬೆಂಗಳೂರು ನಗರದಲ್ಲೂ ಲಸಿಕೆ ದಾಸ್ತಾನು ಕೊರತೆಯಿದೆ. ಜನ ಲಸಿಕೆಗಾಗಿ ಕ್ಯೂ ನಿಲ್ಲುವುದು ತಪ್ಪಿಲ್ಲ. ಅವಶ್ಯಕ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗದ ಕಾರಣ ದಿಲ್ಲಿಗೆ ಹೋಗುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ಈ ಸರ್ಕಾರ ಈಗಲಾದರೂ ಎಚ್ಚೆತ್ತು ಬದ್ಧತೆಯಿಂದ ಕೆಲಸ ಮಾಡುತ್ತಾ ನೋಡೋಣ. ಡೆಲ್ಟಾ ರೂಪಾಂತರಿ ವೈರಾಣು ವಿರುದ್ಧ ರಕ್ಷಣೆಗಾಗಿ ಕೋವಿಶೀಲ್ಡ್ 2 ನೇ ಲಸಿಕೆಯನ್ನು 8 ವಾರಗಳೊಳಗೆ ಕೊಡಬೇಕು. ಅದಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಸ್ವಂತ ಖರ್ಚಿನಲ್ಲಿ ಲಸಿಕೆ ವಿತರಣೆ
ಕಾಂಗ್ರೆಸ್ ನಾಯಕರು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನೇಷನ್‌ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ಈ ಉದ್ದೇಶಕ್ಕೆ ಶಾಸಕರ ನಿಧಿ ಬಳಸುವ ಸದಾಶಯಕ್ಕೆ ಸರ್ಕಾರ ಸಮ್ಮತಿಸಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಕಾಲಮಿತಿಯಲ್ಲಿ ಸರ್ಕಾರ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸಿ, ಜನರನ್ನು ರಕ್ಷಣೆ ಮಾಡಲಿ. ಲಸಿಕೆ ಹಾಕಿಸಿಕೊಳ್ಳುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಕೆಪಿಸಿಸಿ ಮಕ್ಕಳಿಗಾಗಿ ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ನಡೆಸಿದೆ. ವಯಸ್ಕರು ವ್ಯಾಕ್ಸಿನ್ ಪಡೆಯಲು ಪ್ರೇರಣೆಯಾಗುವಂತೆ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ವಿಡಿಯೋ ಮಾಡಿದ 22 ಮಕ್ಕಳಿಗೆ ಆ್ಯಂಡ್ರಾಯ್ಡ್ ಟ್ಯಾಬ್ ಗಳನ್ನು ಬಹುಮಾನವಾಗಿ ಪಕ್ಷದ ವತಿಯಿಂದ ನೀಡಲಾಗಿದೆ. ನಾವಂತೂ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸುತ್ತಿದ್ದೇವೆ. ಆದರೆ, ಲಸಿಕೆ ದಾಸ್ತಾನು ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಆಡಳಿತ ನಡೆಸುವವರು ಎಚ್ಚೆತ್ತುಕೊಂಡು ಕೆಲಸ ಮಾಡಲಿ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷರು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದಾಗ ಪ್ರಳಯ ಆಗಿತ್ತಾ..? ಹೆಚ್​.ವಿಶ್ವನಾಥ್

ABOUT THE AUTHOR

...view details