ಬೆಂಗಳೂರು:ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಹೆಣ್ಣೂರು ಬಂಡೆಯ ವಡ್ಡರಪಾಳ್ಯ ಜಲಾವೃತವಾಗಿದೆ. ಶಿರಡಿ ಸಾಯಿಬಾಬಾ ಟೆಂಪಲ್ ಸ್ಟ್ರೀಟ್ ಬಳಿಯ ನೂರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ಅವಾಂತರಕ್ಕೆ ಮಧ್ಯರಾತ್ರಿಯಿಂದ ಇಲ್ಲಿನ ನಿವಾಸಿಗಳು ಮನೆಯ ಟೆರೇಸ್ ಮೇಲೆ ಇದ್ದಾರೆ.
ಮನೆಗಳ ಮುಂದೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಾರುಗಳು ಹಾಗೂ 5ಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಡೆಯಾಗಿವೆ. ಕಮ್ಮನಹಳ್ಳಿ, ನಾಗವಾರದಿಂದ ಬರುವ ರಾಜಕಾಲುವೆಯ ನೀರು ತುಂಬಿ ಹರಿದು ಈ ಅವಾಂತರ ಸೃಷ್ಟಿಯಾಗಿದೆ. ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮನೆಗಳಿಗೆ ನೀರು ನುಗ್ಗಿದೆ.
ಹೆಬ್ಬಾಳದ ಬಾಣಸವಾಡಿಚೇಳ್ ಕೆರೆಯಿಂದ ಎಲೆಮಾರಪ್ಪ ಕೆರೆಗೆ ಹಾದು ಹೋಗಬೇಕಿದ್ದ ರಾಜಕಾಲುವೆ ನೀರು ತುಂಬಿ ಹರಿದು, ಅಕ್ಕಪಕ್ಕದ ಅನುಗ್ರಹ ಲೇಔಟ್, ಸಾಯಿ ಬಡಾವಣೆ, ವಡ್ಡರಪಾಳ್ಯ ಚೇಳ್ ಕೆರೆ, ಪೂಜಪ್ಪ ಲೇಔಟ್ ಹಾಗೂ ಗೆದ್ದಲಹಳ್ಳಿಯ ಮನೆಗಳಿಗೆ ನೀರು ನುಗ್ಗಿದೆ. ಮಳೆ ಬಂದಾಗಲೆಲ್ಲಾ ಈ ಬಡಾವಣೆಗಳು ಜಲಾವೃತವಾಗುತ್ತವೆ. ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿದಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ಧಾರೆ.
ಇದಲ್ಲದೆ ಸಹಕಾರ ನಗರದ ರಸ್ತೆಯೊಂದು ಸಂಪೂರ್ಣ ನೀರಿನಿಂದ ತುಂಬಿ ಹೋಗಿದೆ. ಅಗ್ರ ಹೊರಮಾವವಿನಲ್ಲೂ ಇದೇ ರೀತಿ ಮನೆಗಳಿಗೆ ನೀರು ನುಗ್ಗುವ ಮಟ್ಟಕ್ಕೆ ರಸ್ತೆಯಲ್ಲಿ ನೀರು ನಿಂತಿದೆ. ಸಂಜಯ್ ನಗರದಲ್ಲಿ ಮರವೊಂದು ಉರುಳಿ ಬಿದ್ದಿದೆ. ಹೆಚ್ಬಿಆರ್ ಲೇಔಟ್ನಲ್ಲೂ ಮಳೆ ಅವಾಂತರದಿಂದ ಲೇಔಟ್ ಸಂಪೂರ್ಣ ಜಲವೃತವಾಗಿದೆ.