ಬೆಂಗಳೂರು:ನಕಾಶೆಯಲ್ಲಿ ಕಾಲುವೆ ಇಲ್ಲ ಎಂಬ ನೆಪದಲ್ಲಿ ಚರಂಡಿ ಮಾಡೋಕೆ ಬಲಾಢ್ಯರು ಅವಕಾಶ ನೀಡಿಲ್ಲ. ಮಳೆ ಬಂದಾಗ ಮಳೆನೀರು ನೇರವಾಗಿ ದಲಿತರ ಕಾಲೋನಿಗೆ ನುಗ್ಗುತ್ತೆ. ನಿನ್ನೆ ರಾತ್ರಿ (ಶನಿವಾರ) ಸುರಿದ ಭಾರಿ ಮಳೆಗೆ ಈಗಾಗಲೇ ಮನೆಗಳು ಕುಸಿದು ಬಿದ್ದು, ಮತ್ತೆ ಕೆಲವು ಬೀಳುವ ಸ್ಥಿತಿ ನಗರದಲ್ಲಿ ಕಂಡುಬಂದಿವೆ.
ಯಲಹಂಕ ತಾಲೂಕಿನ ಹನಿಯೂರು ಕಾಲೋನಿ ನಿವಾಸಿಗಳ ಪಾಲಿಗೆ ಮಳೆ ಶಾಪವಾಗಿದೆ. ಹನಿಯೂರಲ್ಲಿ ಹನಿ ಮಳೆಯಾದ್ರೆ ಸಾಕು ದಲಿತರ ಕಾಲೋನಿಗೆ ನೀರು ನುಗ್ಗುತ್ತೆ. ಮಳೆ ನೀರು ಹೊರಹಾಕಲು ಕುಟುಂಬದ ಸದಸ್ಯರು ಇಡೀ ರಾತ್ರಿ ಜಾಗರಣೆ ಮಾಡ್ತಾರೆ. ದನಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕಷ್ಟಪಡ್ತಾರೆ. ದವಸ, ಧಾನ್ಯ, ನೀರು ಪಾಲಾಗಿದ್ದನ್ನು ಕಂಡು ಕಣ್ಣೀರು ಹಾಕ್ತಾರೆ. ಕಾಲೋನಿ ನಿವಾಸಿಗಳ ಕಣ್ಣೀರಿಗೆ ಕಾರಣವಾಗಿರುವುದು ಈ ಚರಂಡಿಯ ಅವ್ಯವಸ್ಥೆ.
ಮಳೆ ನೀರಿನ ಸಮಸ್ಯೆ ಬಗ್ಗೆ ಕಾಲೋನಿ ನಿವಾಸಿ ಮಾತನಾಡಿರುವುದು ಸಮಸ್ಯೆ ಏನು?: ನಕಾಶೆಯಲ್ಲಿ ಕಾಲುವೆ ಇಲ್ಲವೆಂಬ ಕಾರಣಕ್ಕೆ ರಾಮಕೃಷ್ಣಪ್ಪ ಮತ್ತು ಗೋಪಾಲ್ ಎಂಬುವರು ತಮ್ಮ ನಿವೇಶಗಳ ಮುಂದೆ ಚರಂಡಿ ನಿರ್ಮಾಣಕ್ಕೆ ಕಾಲೋನಿ ಜನರಿಗೆ ಅವಕಾಶ ನೀಡಿಲ್ಲ. ಇದರಿಂದ ಮಳೆನೀರು ಮುಂದೆ ಹರಿಯಲು ಸಾಧ್ಯವಾಗದೆ ಕಾಲೋನಿಯಲ್ಲಿ ಎರಡು ಅಡಿಯಷ್ಟು ನೀರು ನಿಲ್ಲುತ್ತೆ. ಇದರಿಂದ ಇಲ್ಲಿನ 20ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗುತ್ತದೆ.
ಪರಿಣಾಮ ಈಗಾಗಲೇ ಕೆಲವು ಮನೆಗಳ ಗೋಡೆ ಕುಸಿದು ಬಿದ್ದಿವೆ. ಮತ್ತೆ ಕೆಲವು ಬೀಳುವ ಸ್ಥಿತಿಯಲ್ಲಿವೆ. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಇಡೀ ರಾತ್ರಿ ಜಾಗರಣೆ ಮಾಡಿ ನೀರನ್ನು ಹೊರಹಾಕ್ತಾರೆ. ಕಾಲೋನಿಯ ಸ್ಥಿತಿ ಹೀಗಿದ್ರೆ, ಊರಿನ ಸ್ಥಿತಿ ಸಹ ಇದಕ್ಕೆ ಹೊರತಾಗಿಲ್ಲ.
ಊರಿಗೆ ನುಗ್ಗಿದ ನೀರು:ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಹಾಗೂ ಕಾಲುವೆ ಜಾಗಗಳನ್ನ ಒತ್ತುವರಿ ಮಾಡಿಕೊಂಡು ಮರಗಳನ್ನ ಹಾಕಿರುವುದರಿಂದ ಮಳೆ ನೀರು ಕೆರೆಗೆ ಹರಿದು ಹೋಗಲು ಸಾಧ್ಯವಾಗದೆ ಊರಿಗೆ ನುಗ್ಗಿದೆ. ಶಾಂತಕುಮಾರ್ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಗೆ ಮಳೆ ನೀರು ನುಗ್ಗಿ ಜಾನುವಾರುಗಳ ಆರೋಗ್ಯಕ್ಕೆ ಕುತ್ತು ತಂದಿದೆ. ಕೋಳಿಗಳನ್ನ ಬಲಿ ತೆಗೆದುಕೊಂಡಿದೆ. ಪಶು ಆಹಾರವಾದ ಬೂಸ ಸಹ ನೀರು ಪಾಲಾಗಿದೆ.
ಕಳೆದ ಎರಡು ವರ್ಷದಿಂದ ಹನಿಯೂರು ಗ್ರಾಮಕ್ಕೆ ಮಳೆ ಶಾಪವಾಗಿದೆ. ಅಗಲವಾದ ಚರಂಡಿ ವ್ಯವಸ್ಥೆ ಮತ್ತು ಕಾಲುವೆಗಳ ಒತ್ತುವರಿ ತೆರವು ಮಾಡುವುದರಿಂದ ಗ್ರಾಮಸ್ಥರ ನೆಮ್ಮದಿಗೆ ಕಾರಣವಾಗಬಹುದು. ಆದರೆ, ಇಲ್ಲಿನ ಗ್ರಾಮ ಪಂಚಾಯತ್ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಿಗೆ ಬೇಜವಾಬ್ದಾರಿ ವರ್ತನೆ ತೋರಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಓದಿ:ಮೋದಿ ಕಾರ್ಯಕ್ರಮದಿಂದ ಕೊರೊನಾ ಹರಡಲ್ವಾ ಎಂಬ ಪ್ರಶ್ನೆಗೆ ಸಿಟ್ಟಾದ್ರಾ ಸಿಎಂ!?