ಬೆಂಗಳೂರು:ಕಾವೇರಿ ನದಿ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ಕರೆದು ಆ ಭಾಗದ ಕಾಮಗಾರಿಗಳನ್ನು ಪೂರ್ಣಗೊಳಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರು ಪ್ರಶ್ನೆ ಕೇಳಿ, ಹೇಮಾವತಿ ಜಲಾಶಯ ಯೋಜನೆಯಡಿ ಅನುಮೋದನೆಗೊಂಡು ಟೆಂಡರ್ ಹಂತದಲ್ಲಿದ್ದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. 2019ರ ಸೆಪ್ಟೆಂಬರ್ 20ರಂದು ನಡೆದ ಕಾವೇರಿ ನೀರಾವರಿ ನಿಗಮದ 70ನೇ ಸಭೆಯಲ್ಲಿ 1023 ಸಂಖ್ಯೆಯ 632 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅನುಷ್ಠಾನಗೊಳ್ಳದೆ ಇದ್ದ 338 ಸಂಖ್ಯೆಯ 223 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೈಬಿಡಲಾಗಿದೆ. ಅದೇ ಸಭೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಆರ್ಥಿಕ ಮಿತವ್ಯಯದ ದೃಷ್ಟಿಯಿಂದ ಅನುಷ್ಠಾನಗೊಳ್ಳದೇ ಇರುವ ಕಾಮಗಾರಿಗಳನ್ನು ತಡೆಹಿಡಿಯುವುದು ಸರಿಯಲ್ಲ. ಅನುಮೋದನೆಗೊಂಡಿರುವ ಕಾಮಗಾರಿಗೆ ಅನುಮತಿ ನೀಡಿ ಎಂದು ಮನವಿ ಮಾಡಿದರು.
ಆಗ ಸಚಿವರು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಶಾಸಕರ ಸಭೆ ಕರೆಯುವುದಾಗಿ ಹೇಳಿದರು.
ಶುದ್ಧೀಕರಣ ಘಟಕಗಳ ಕಾಮಗಾರಿ ಶೀಘ್ರ: ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಬರುವ 110 ಗ್ರಾಮಗಳ ಒಳಚರಂಡಿ ವ್ಯವಸ್ಥೆ ಕಾಮಗಾರಿಗಳನ್ನು ಬೆಂಗಳೂರು ಜಲಮಂಡಳಿ ಕೈಗೆತ್ತಿಕೊಂಡಿದ್ದು, ಈ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಶುದ್ಧೀಕರಣ ಘಟಕಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿಂದು ಜೆಡಿಎಸ್ ಶಾಸಕ ಎ. ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗೆ ಟೆಂಡರ್ ಕರೆದಿದ್ದು, 2023ರ ಅಂತ್ಯಕ್ಕೆ ಒಳಚರಂಡಿ ಮತ್ತು ಶುದ್ಧೀಕರಣ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದಿದ್ದು, ಸಣ್ಣ ನೀರಾವರಿ ಇಲಾಖೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.