ಬೆಂಗಳೂರು:ಉರಿಯುವ ಬೇಸಿಗೆ ನಡುವೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ಜನರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜಾಜಿನಗರದ ಲಕ್ಷ್ಮೀನಾರಾಯಣಪುರದ 13 ನೇ ಅಡ್ಡರಸ್ತೆಯ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಬೇಸಿಗೆ ಕಾಲ ಶಾಪವಾಗಿ ಪರಿಣಮಿಸಿದೆ. ರಸ್ತೆಯಲ್ಲಿರುವ ಬೋರ್ವೆಲ್ ಕೆಟ್ಟಿದ್ದು, ಕಾವೇರಿ ನೀರು ಕೂಡಾ ಸರಿಯಾದ ಸಿಗದೆ ಜನ ಪರದಾಡುತ್ತಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಕುಮಾರಿ ಪಳನಿಕಾಂತ್ ಆಗಲಿ, ಶಾಸಕರಾದ ಸುರೇಶ್ ಕುಮಾರ್, ಸಂಸದ ಪಿಸಿ ಮೋಹನ್ ಆಗಲಿ ನಮ್ಮ ಸಮಸ್ಯೆ ಕೇಳೋದಕ್ಕೆ ಬರುತ್ತಿಲ್ಲ. ಹಾಗಾಗಿ ವೋಟ್ ಕೇಳಲು ಬರೋದು ಬೇಡ. ನೀರು ಕೊಡದಿದ್ರೆ ಮತ ಹಾಕೊಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ವರ್ಷದಿಂದ 13, 14 ನೇ ಅಡ್ಡರಸ್ತೆಯಲ್ಲಿರುವ ಜನರಿಗೆ ನೀರನ್ನು ಕೇವಲ ಎರಡು ಗಂಟೆ ಕೊಡುತ್ತಾರೆ. ಪಕ್ಕದ ರಸ್ತೆಗಳಿಗೆ ದಿನವಿಡಿ ನೀರು ಪೂರೈಕೆ ಮಾಡುತ್ತಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸುತ್ತಿದ್ದು, ಇತ್ತ ಬೋರ್ವೆಲ್ ರಿಪೇರಿಯೂ ಮಾಡುತ್ತಿಲ್ಲ. ಬಹುದೂರ ಹೋಗಿ ನೀರು ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿವರ್ಷ ಬೇಸಿಗೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗುತ್ತಿದ್ದು, ಯಾರು ಕೂಡ ಇತ್ತ ಸುಳಿಯುತ್ತಿಲ್ಲ. ಈ ಕುರಿತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೆ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡುತ್ತಾರೆ. ಇನ್ನು ಸ್ಥಳೀಯ ಕಾರ್ಪೋರೇಟರ್ ಪತಿ ಪಳನಿಕಾಂತ್ ಅವರನ್ನ ಪ್ರಶ್ನಿಸಿದ್ರೆ ಸರ್ವಿಸ್ ವೇಳೆ ಆ ರಸ್ತೆಗೆ ಬರುವ ನೀರು ನಿಂತು ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.