ಬೆಂಗಳೂರು : ಕಳೆದ ಮೂರು ತಿಂಗಳಲ್ಲಿ ಕಾವೇರಿಯಿಂದ ತಮಿಳುನಾಡಿಗೆ 425 ಟಿಎಂಸಿ ನೀರು ಹರಿದು ಹೋಗಿದ್ದು, ಇದರ ಪರಿಣಾಮವಾಗಿ ಉಭಯ ರಾಜ್ಯಗಳ ಮಧ್ಯೆ ನೀರಿಗಾಗಿ ಸಂಘರ್ಷ ನಡೆಯುವ ಪರಿಸ್ಥಿತಿ ನಿವಾರಣೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಗಳ ನಡುವೆ ಪದೇ ಪದೆ ಕಚ್ಚಾಟ ನಡೆದಿದೆ. ಬೆಳೆದು ನಿಂತ ಬೆಳೆಗೆ ನೀರಿಲ್ಲ ಎಂದು ಅವರು, ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಕುಡಿಯುವ ನೀರಿಲ್ಲ ಎಂದು ನಾವು ಹೇಳುವ ಪರಿಸ್ಥಿತಿ ಇಷ್ಟೊತ್ತಿಗೆ ಉದ್ಭವವಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಇದು ಎಲ್ಲರಿಗೂ ಸಮಾಧಾನ ತರುವ ಸಂಗತಿ ಎಂದು ಹೇಳಿದರು.
ತಮಿಳುನಾಡಿಗೆ 425 ಟಿಎಂಸಿ ನೀರು : ಕಳೆದ ಜೂನ್ ತಿಂಗಳಿನಿಂದ ಇದುವರೆಗೆ 425 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದ್ದು, ಕಳೆದ ಐವತ್ತು ವರ್ಷಗಳಲ್ಲೇ ಇದು ದಾಖಲೆ ಎಂದು ಹೇಳಿದರು. ಕರ್ನಾಟಕದ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿಗೆ ನೀರು ಹರಿದು ಹೋಗಿದ್ದಕ್ಕೆ ಬಿಳಿಗುಂಡ್ಲು ಜಲಾಶಯವೇ ಮಾಪನ ಕೇಂದ್ರ. ಈ ಕೇಂದ್ರದಲ್ಲಿ ದಾಖಲಾಗಿರುವ ನೀರಿನ ಪ್ರಮಾಣ 425 ಟಿಎಂಸಿ ಎಂದು ಹೇಳಿದರು.
1974 ರ ಕಾವೇರಿ ಒಪ್ಪಂದದ ನಂತರ ಈ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿರಲಿಲ್ಲ. ಇದು ಸಾರ್ವಕಾಲಿಕ ದಾಖಲೆ. ಈ ರೀತಿ ತಮಿಳುನಾಡಿಗೆ 425 ಟಿಎಂಸಿ ನೀರು ಹರಿದು ಹೋದ ನಂತರವೂ ಕರ್ನಾಟಕದ ಕಾವೇರಿ ನದಿ ಪಾತ್ರದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ 48 ಟಿಎಂಸಿಯಷ್ಟು ನೀರು ಸಂಗ್ರಹವಿದ್ದು, ಕಬಿನಿ ಜಲಾಶಯದಲ್ಲಿ ಹದಿನೆಂಟು ಟಿಎಂಸಿಯಷ್ಟು ನೀರು ಸಂಗ್ರಹ ಇದೆ ಎಂದು ಇದೇ ವೇಳೆ ಹೇಳಿದರು.
ಅತಿವೃಷ್ಟಿಯಿಂದ ಉಂಟಾದ ಮಳೆ ಹಾನಿ ವಿವರ: ಅತಿವೃಷ್ಟಿ ಬಗ್ಗೆ ಮಾತು ಮುಂದುವರಿಸಿದ ಸಚಿವ ಅಶೋಕ್ ಅವರು, ರಾಜ್ಯದಲ್ಲಿ ಜುಲೈನಿಂದ ಸೆಪ್ಟೆಂಬರ್ ನಡುವೆ ನಾಲ್ಕು ಹಂತದಲ್ಲಿ ಭಾರಿ ಮಳೆಯಾಗಿದೆ. ಇದರಿಂದ 8,91,187 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. 127 ಜನ ಸಾವನ್ನಪ್ಪಿದ್ದಾರೆ. 1289 ಜಾನುವಾರುಗಳು, 1,53,413 ಕೋಳಿಗಳು ಸಾವನ್ನಪ್ಪಿವೆ. ಹಾಗೂ 45,465 ಮನೆಗಳಿಗೆ ಹಾನಿಯಾಗಿದೆ ಎಂದರು.
ಬೆಳೆ ಹಾನಿಯ ಕುರಿತ ಸಮೀಕ್ಷೆ ಕೆಲಸ ಇನ್ನೂ ಪೂರ್ಣವಾಗಿಲ್ಲ. ಸಮೀಕ್ಷೆ ಮುಗಿದ ಮೇಲೆ ಇದರ ಪ್ರಮಾಣ ಇನ್ನಷ್ಟು ಹೆಚ್ಚಬಹುದು. ಹಿಂದೆಂದೂ ಇಲ್ಲದಷ್ಟು ಬೆಳೆಹಾನಿ ಹಾಗೂ ಆಸ್ತಿಪಾಸ್ತಿಯ ಹಾನಿಯನ್ನು ನಾಲ್ಕು ಹಂತದ ನೆರೆಯಿಂದ ನಾಡು ಅನುಭವಿಸಿದೆ ಎಂದು ವಿವರಿಸಿದರು.
ಮಳೆಯಿಂದ 27,648 ಕಿ.ಮೀ ರಸ್ತೆ, 2,325 ಸೇತುವೆ- ಕಾಲುವೆಗಳು, 8627 ಶಾಲಾ ಕೊಠಡಿಗಳು, 269 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5194 ಅಂಗನವಾಡಿ ಕೇಂದ್ರಗಳು ಹಾಗೂ 774 ಸಣ್ಣ ಕೆರೆಗಳು ಸಂಪೂರ್ಣ ಹಾಳಾಗಿವೆ ಎಂದು ಅಂಕಿ-ಸಂಖ‍್ಯೆ ಸಹಿತ ವಿವರ ನೀಡಿದರು.
ಕಳೆದ ಐವತ್ತು ವರ್ಷದಲ್ಲೇ ಅತ್ಯಧಿಕ ಮಳೆ :ಜುಲೈನಿಂದ ಸೆಪ್ಟೆಂಬರ್ ನಡುವೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇಕಡಾ 151, ಉತ್ತರ ಒಳನಾಡಿನಲ್ಲಿ ಶೇ 50 ಹಾಗೂ ಮಲೆನಾಡು ಭಾಗದಲ್ಲಿ ಶೇ 35ರಷ್ಟು ಹೆಚ್ಚಿನ ಮಳೆ ಸುರಿದಿದೆ. ಇದು ಕಳೆದ ಐವತ್ತು ವರ್ಷಗಳಲ್ಲೇ ಅತೀ ಹೆಚ್ಚು. ದಕ್ಷಿಣ ಒಳನಾಡೊಂದರಲ್ಲೇ 33,475 ವಿದ್ಯುತ್ ಕಂಬಗಳು ಬಿದ್ದಿವೆ. ನಾಲ್ಕು ಸಾವಿರ ಕಿಲೋ ಮೀಟರ್‍ನಷ್ಟು ಉದ್ದದ ವಿದ್ಯುತ್ ಸಂಪರ್ಕ ಜಾಲ ರಾಜ್ಯದಲ್ಲಿ ನಾಶವಾಗಿದೆ. ಬೆಳೆಹಾನಿಯ ಪೈಕಿ ಗದಗ ಜಿಲ್ಲೆಯಲ್ಲಿ ಅತ್ಯಧಿಕ 1 ಲಕ್ಷದ 676 ಹೆಕ್ಟೇರ್ ಬೆಳೆಹಾನಿ ಸಂಭವಿಸಿದೆ ಎಂದು ವಿವರಿಸಿದರು.
ಪ್ರಮುಖ ಜಲಾಶಯದಲ್ಲಿ ನೀರು ಸಂಗ್ರಹ :ಕಳೆದ ಐವತ್ತು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನೀರು ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹವಾಗಿದೆ. ಕೃಷ್ಣಾ ಪಾತ್ರದ ಆಲಮಟ್ಟಿಯಲ್ಲಿ ಸದ್ಯ 116 ಟಿಎಂಸಿಅಡಿ (ಗರಿಷ್ಟ ಸಂಗ್ರಹ ಮಟ್ಟ 143 ಟಿಎಂಸಿ ಅಡಿ) ಹಾಗೂ ಕಾವೇರಿ ಪಾತ್ರದ ಕೆ.ಆರ್. ಸಾಗರದಲ್ಲಿ 48.73 ಟಿಎಂಸಿಎಫ್‍ಟಿ (ಗರಿಷ್ಠ ಮಟ್ಟ 49.45 ಟಿಎಂಸಿ ಅಡಿ) ನೀರು ಸಂಗ್ರಹವಾಗಿದ್ದು, ಇದೂ ಕೂಡ ಒಂದು ದಾಖಲೆ ಎಂದರು.
ಮಳೆಯಿಂದಾಗಿ ಅಂತರ್ಜಲ ಪ್ರಮಾಣ ಹೆಚ್ಚಿದ್ದು, 125 ತಾಲೂಕುಗಳಲ್ಲಿ ಇದು 4 ಮೀಟರ್‍ನಷ್ಟು ಏರಿಕೆಯಾಗಿದೆ. ಶಾಶ್ವತ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಗದಗದಂತಹ ಜಿಲ್ಲೆಗಳಲ್ಲೂ ಅಂತರ್ಜಲ ಏರಿಕೆಯಾಗಿರುವುದು ನೆರೆಯ ಸಂಕಷ್ಟದ ನಡುವಿನ ನೆಮ್ಮದಿಯ ಅಂಶ ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಟ್ಟು 42 ಕೆರೆಗಳನ್ನು ಮುಚ್ಚಲಾಗಿದೆ : ಬೆಂಗಳೂರಿನಲ್ಲಿ 42 ಕೆರೆಗಳನ್ನು ಮುಚ್ಚಲಾಗಿದೆ. ಇಲ್ಲೂ ಕೂಡ ದೊಡ್ಡ ಮಳೆಯಾಗಿ ಮಹದೇಪುರ ಹಾಗೂ ಬೊಮ್ಮನಹಳ್ಳಿ ಭಾಗದಲ್ಲಿ ಮಾನವ ಮಾಡಿದ ತಪ್ಪಿನಿಂದ ಆನಾಹುತವಾಗಿದೆ. ಎಂದಾಗ, ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಕೆ.ಜೆ. ಜಾರ್ಜ್, ನನ್ನ ಕಾಲದಲ್ಲಿ ಯಾವ ಕೆರೆ ಮುಚ್ಚಲಾಗಿದೆ. ಯಾವ ಕೆರೆ ಕಬಳಿಸಿದ್ದೇನೆ ಹೇಳಿ, ಒತ್ತುವರಿ ಮಾಡಿದ್ದರೆ ತನಿಖೆ ನಡೆಸಿ. ಕಾನೂನು ಬಾಹಿರವಾಗಿದ್ದರೆ ಶಿಕ್ಷೆ ಕೊಡಿ, ನಿಮ್ಮ ಪಕ್ಷದವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೆರೆ ಮುಚ್ಚಿರುವುದು ಸತ್ಯ. ಕಾಲ ಕಾಲಕ್ಕೆ ಅಭಿವೃದ್ಧಿಯಾದಂತೆ ಕೆರೆ ಮುಚ್ಚಲಾಗಿದೆ. ವೈಯಕ್ತಿಕವಾಗಿ ಮೈಮೇಲೆ ಹಾಕಿಕೊಳ‍್ಳಬೇಡಿ ಎಂದು ಸಲಹೆ ಮಾಡಿದರು. ಆಗ ಜಾರ್ಚ್ ಅವರು, ನಿಮ್ಮ ಪಕ್ಷದವರು ಈಗಾಗಲೇ ಮೈ ಮೇಲೆ ಸಗಣಿ ಸುರಿದಿದ್ದಾರೆ ಎಂದರು.
ಇದನ್ನೂ ಓದಿ :ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ, ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ