ಮಹದೇವಪುರ(ಬೆಂಗಳೂರು):ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬೆಂಗಳೂರು ಸಂಪೂರ್ಣ ನದಿಯಂತಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಮಹದೇವಪುರ ಕ್ಷೇತ್ರದ ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ ಬೋ ಲೇಔಟ್ ಹಾಗೂ ಕಂಟ್ರಿ ಸೈ್ಡ್ ಸೇರಿದಂತೆ ಹಲವು ಲೇಔಟ್ಗಳು ಮುಳುಗಡೆಯಾಗಿದ್ದು, ಬಹುತೇಕ ಎಲ್ಲಾ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ತೆರಳಿದ್ದಾರೆ.
ಸರ್ಜಾಪುರ ರಸ್ತೆಯ ಎರಡು ಲೇಔಟ್ಗಳು ಸಂಪೂರ್ಣ ಮಳೆ ನೀರಿನಿಂದ ತುಂಬಿವೆ. ರೈನ್ ಬೋ ಲೇಔಟ್ನಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲಾರೂ ಖಾಲಿ ಮಾಡಿದ್ದಾರೆ. ಎರಡು-ಮೂರು ಅಂತಸ್ತುಗಳ ಮೇಲೆ ವಾಸವಾಗಿರುವ 10 ರಿಂದ 12 ಮನೆಗಳಲ್ಲಿ ಮಾತ್ರ ನಿವಾಸಿಗಳು ಉಳಿದುಕೊಂಡಿದ್ದಾರೆ. ಕಂಟ್ರಿ ಸೈಡ್ ಲೇಔಟ್ನಲ್ಲಿ 35ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಸಂಪೂರ್ಣವಾಗಿ ಮನೆ ಖಾಲಿ ಮಾಡಿ ಲಾಡ್ಜ್ ಮತ್ತು ಹೋಟೆಲ್ಗಳಲ್ಲಿ ತಂಗಿದ್ದಾರೆ. ಮೂರ್ನಾಲ್ಕು ಅಡಿ ನೀರು ತುಂಬಿರುವ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ಮುಳುಗಿವೆ.