ಬೆಂಗಳೂರು: ವಿದ್ಯಾಭ್ಯಾಸ, ಉದ್ಯೋಗದ ಸೋಗಿನಲ್ಲಿ ವೀಸಾ ಪಡೆದುಕೊಂಡು ಬೆಂಗಳೂರಿಗೆ ಆಗಮಿಸುವ ವಿದೇಶಿಯರು ವೀಸಾ ಅವಧಿ ಮುಗಿದರೂ ಇಲ್ಲಿಯೇ ನೆಲೆಸುತ್ತಿರುವುದು ಪತ್ತೆಯಾಗುತ್ತಿದೆ. ಇದಲ್ಲದೆ ಅನೇಕ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿರುವುದು ದೃಢವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ವಿದೇಶಿ ಪ್ರಜೆಗಳು ನೆಲೆಸಿರುವ ಬಾಡಿಗೆ ಮನೆ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.
ಹಣದಾಸೆಗಾಗಿ ವಿದೇಶಿಯರಿಗೆ ಬಾಡಿಗೆ ನೀಡುವ ಮೂಲಕ ಕಾನೂನನ್ನು ಗಾಳಿಗೆ ತೂರಿ ಕ್ರಿಮಿನಲ್ಗಳಿಗೆ ಪರೋಕ್ಷವಾಗಿ ಸಾಥ್ ನೀಡಿರುವ ಮನೆ ಮಾಲೀಕರಿಗೆ ಬಂಧನ ಭೀತಿ ಎದುರಾಗಿದೆ. ವಿದೇಶಿ ಬಾಡಿಗೆದಾರರ ಬಗ್ಗೆ ಸೂಕ್ತ ದಾಖಲೆ ನೀಡದ ಮನೆ ಮಾಲೀಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಚುರುಕುಗೊಳಿಸಿದ್ದು, ನಗರ ಪೂರ್ವ ವಿಭಾಗದಲ್ಲಿ 15 ಮಂದಿ ಮನೆ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ವಿದೇಶಿಗರಿದ್ದ ಮನೆ ಸೀಜ್
ಈ ಪೈಕಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರಿಗೆ ನೀಡಿದ್ದ ಒಂದು ಮನೆಯನ್ನ ಸೀಜ್ ಮಾಡಲಾಗಿದೆ. ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿನಗರ, ಸಂಪಿಗೆ ಹಳ್ಳಿ, ಕೊತ್ತನೂರು, ಗೋವಿಂದಪುರ ಠಾಣಾ ವ್ಯಾಪ್ತಿಗಳಲ್ಲಿ ನೈಜೀರಿಯಾ ಸೇರಿದಂತೆ ಅಫ್ರಿಕಾ ಪ್ರಜೆಗಳು ನೆಲೆಸಿದ್ದಾರೆ. ಅಕ್ರಮವಾಗಿ ನೆಲೆಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಪ್ರಜೆಗಳಿಗೆ ಕಾನೂನುಬಾಹಿರವಾಗಿ ಆಶ್ರಯ ಕೊಟ್ಟವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದಾರೆ.