ಬೆಂಗಳೂರು :ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ ಬೆನ್ನಲೇ ದಂಡ ಕಟ್ಟಲು ವಾಹನ ಸವಾರರು ಮುಗಿಬೀಳುತ್ತಿದ್ದಾರೆ. ಈಗಾಗಲೇ 51 ಕೋಟಿಗಿಂತ ಹೆಚ್ಚು ದಂಡ ಪಾವತಿಯಾಗಿದೆ. ಇದರ ಬೆನ್ನಲ್ಲೇ ನಕಲಿ ನಂಬರ್ ಸಂಖ್ಯೆ ಅಳವಡಿಸಿಕೊಂಡಿರುವ ಚಾಲಾಕಿ ಸವಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ವಿಶೇಷ ಸಂಚಾರ ಆಯುಕ್ತರು ಎಲ್ಲಾ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ತಾಕೀತು ಮಾಡಿದ್ದಾರೆ.
ಈ ವರ್ಷದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಬಳಸಿದ್ದ ವಾಹನ ಸವಾರರ ಮೇಲೆ ಕ್ರಮಗೊಂಡಿರುವ ಸಂಚಾರ ಪೊಲೀಸರು ಫೆ. 7ಕ್ಕೆ ಕೊನೆಗೊಂಡಂತೆ 10,422 ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದು ಈ ಸಂಬಂಧ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಂತಹ ವಾಹನ ಸವಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದ್ದು, ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲು ನಗರ ಸಂಚಾರ ವಿಭಾಗ ಮುಂದಾಗಿದೆ.
2022 ಹಾಗೂ 2021ರಲ್ಲಿ ಅನುಕ್ರಮವಾಗಿ 3,88,488, ಹಾಗೂ 4,56,521 ಕೇಸ್ ಗಳು ದಾಖಲಾಗಿತ್ತು. 50 ಪರ್ಸೆಂಟ್ ಆಫರ್ ನೀಡಿದ ಬಳಿಕ ದಂಡ ಕಟ್ಟಲು ಮುಂದಾದ ಸವಾರರಿಗೆ ತಮ್ಮ ವಾಹನ ನೋಂದಣಿ ಸಂಖ್ಯೆಯನ್ನು ಅನಾಮಿಕರು ಫೇಕ್ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವುದು ತಡವಾಗಿ ಅರಿತುಕೊಳ್ಳುತ್ತಿರುವುದು ಬೆಳಕಿಗೆ ಬರುತ್ತಿದೆ.
ನಕಲಿ ನಂಬರ್ ಪ್ಲೇಟ್ ಕ್ರಿಮಿನಲ್ ಕೇಸ್ :ದಂಡ ಪಾವತಿ ವೇಳೆ ನಕಲಿ ನಂಬರ್ ಪ್ಲೇಟ್ ಬಳಸಿ ಕಿಡಿಗೇಡಿಗಳು ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅಸಲಿ ವಾಹನ ಮಾಲೀಕರಿಗೆ ನೊಟೀಸ್ ಬರುತ್ತಿವೆ. ತಮ್ಮದಲ್ಲದ ತಪ್ಪಿಗೆ ದಂಡ ಕಟ್ಟಬೇಕಾ ಎಂದು ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾರದೋ ವಾಹನಗಳಿಗೆ ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಟ್ರಾಫಿಕ್ ನಿಯಮ ಉಲ್ಲಂಘಟನೆ ಮಾಡುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಹೀಗಾಗಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ನಿರ್ಭಿತಿಯಿಂದ ಓಡಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.