ಕರ್ನಾಟಕ

karnataka

ETV Bharat / state

ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಬೇಕಾಗಿವೆ ಗೋದಾಮುಗಳು...!? - ಗೋದಾಮುಗಳ ಅಗತ್ಯತೆ

ರಾಜ್ಯ ಉಗ್ರಾಣ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು, ಕೃಷಿ ಉತ್ಪನ್ನ ಸಹಕಾರ ಮಂಡಳಿ, ಸಹಕಾರ, ರೇಷ್ಮೆ, ಎಪಿಎಂಸಿಗೆ ಸೇರಿದ ಪ್ರತ್ಯೇಕ ಗೋದಾಮುಗಳ ಜೊತೆಗೆ ವೈಜ್ಞಾನಿಕ ಮಾದರಿಯ ಬೃಹತ್ ಗೋದಾಮುಗಳು ಸಹ ರಾಜ್ಯದಲ್ಲಿವೆ.

Warehouses
ಗೋದಾಮು

By

Published : Jul 25, 2020, 8:07 AM IST

ಬೆಂಗಳೂರು:ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಮೊದಲು ಮಳೆ, ಗಾಳಿ, ಹಾಗೂ ಇತರ ವೈಪರೀತ್ಯದಿಂದ ಸಂರಕ್ಷಿಸಿ ವೈಜ್ಞಾನಿಕವಾಗಿ ಸಂಗ್ರಹಣೆ ಮಾಡಿ ರೈತರಿಗೆ ಹಾಗೂ ಬಳಕೆದಾರರಿಗೆ ಕೃಷಿ ಉತ್ಪನ್ನಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಗೋದಾಮುಗಳ ಅಗತ್ಯವಿದೆ.

ರಾಜ್ಯ ಉಗ್ರಾಣ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು, ಕೃಷಿ ಉತ್ಪನ್ನ ಸಹಕಾರ ಮಂಡಳಿ, ಸಹಕಾರ, ರೇಷ್ಮೆ, ಎಪಿಎಂಸಿಗೆ ಸೇರಿದ ಪ್ರತ್ಯೇಕ ಗೋದಾಮುಗಳ ಜೊತೆಗೆ ವೈಜ್ಞಾನಿಕ ಮಾದರಿಯ ಬೃಹತ್ ಗೋದಾಮುಗಳು ಸಹ ರಾಜ್ಯದಲ್ಲಿವೆ. ರಾಜ್ಯದಲ್ಲಿ ಮುಖ್ಯವಾಗಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಹತ್ತಿ, ಕಬ್ಬು, ನೆಲಗಡಲೆ, ಆಲೂಗಡ್ಡೆ, ಈರುಳ್ಳಿ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 123 ಲಕ್ಷ ಮೆಟ್ರಿಕ್ ಟನ್​ನಷ್ಟು ಆಹಾರಧಾನ್ಯವನ್ನು ಉತ್ಪಾದಿಸಲಾಗುತ್ತಿದೆ.

ರಾಜ್ಯದಲ್ಲಿ ಅಂದಾಜು 41 ಲಕ್ಷ ಮೆಟ್ರಿಕ್ ಟನ್​ನಷ್ಟು ಆಹಾರಧಾನ್ಯಗಳ ಸಂಗ್ರಹಣೆಗೆ ಗೋದಾಮುಗಳ ಅವಶ್ಯಕತೆ ಇದ್ದು, ಇದರಲ್ಲಿ ಸುಮಾರು 26.50 ಲಕ್ಷ ಮೆಟ್ರಿಕ್ ಟನ್​ನಷ್ಟು ಕೃಷಿ ಉತ್ಪನ್ನಗಳು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳ ಸಂಗ್ರಹ ಸಾಮರ್ಥ್ಯದ ಗೋದಾಮುಗಳನ್ನು ವಿವಿಧ ಸಂಸ್ಥೆಗಳ ಮೂಲಕ ನಿರ್ಮಾಣ ಮಾಡಲಾಗಿದೆ.

ಏನೇನು ದಾಸ್ತಾನು ಮಾಡಬಹುದು :

ರಾಗಿ, ಭತ್ತ, ಗೋಧಿ, ಮೆಕ್ಕೆಜೋಳ, ತೊಗರಿ, ಜೋಳ, ಸೂರ್ಯಕಾಂತಿ, ಶೇಂಗಾ, ಹೆಸರು, ಆಲೂಗಡ್ಡೆ, ಈರುಳ್ಳಿ ಮತ್ತಿತರ ಉತ್ಪನ್ನಗಳನ್ನು ಬಹಳಷ್ಟು ದಿನಗಳವರೆಗೆ ನಾಶವಾಗದಂತೆ ಗೋದಾಮುಗಳಲ್ಲಿ ಇಡುವ ವ್ಯವಸ್ಥೆ ಇದೆ. ಪ್ರಸ್ತುತ ರಾಜ್ಯ ಉಗ್ರಾಣ ನಿಗಮದಡಿ ಸುಮಾರು 17 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಮಾಡುವಷ್ಟು ಸುಮಾರು 150 ಗೋದಾಮುಗಳು ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಇವೆ. ಜಿಲ್ಲೆಗಳಲ್ಲಿರುವ ಗೋದಾಮುಗಳಲ್ಲಿ ಸುಮಾರು 20 ರಿಂದ 30 ಸಾವಿರ ಟನ್ ಉತ್ಪನ್ನಗಳನ್ನು ಸಂಗ್ರಹ ಮಾಡಬಹುದು. ಅದೇ ರೀತಿ ತಾಲೂಕು ಕೇಂದ್ರಗಳಲ್ಲಿರುವ ಗೋದಾಮುಗಳಲ್ಲಿ 5 ರಿಂದ 10 ಸಾವಿರ ಟನ್​ನಷ್ಟು ಸಂಗ್ರಹ ಮಾಡಬಹುದು ಎಂದು ಉಗ್ರಾಣ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈತರಿಂದ ಒಂದು ಚೀಲಕ್ಕೆ ಐದರಿಂದ ಆರು ರೂಪಾಯಿ ಬಾಡಿಗೆ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಬೆಲೆ ಕುಸಿತ ಸಂದರ್ಭದಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ರಾಜ್ಯ ಉಗ್ರಾಣ ನಿಗಮದಲ್ಲಿ ದಾಸ್ತಾನು ಮಾಡಿ ಹೆಚ್ಚು ಬೆಲೆ ದೊರೆತಾಗ ಮಾರಾಟ ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ಈ ಹಿಂದೆ ಇದ್ದ ಮೈತ್ರಿ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದ್ದು, 'ಸರ್ವಿಸ್ ಪ್ರೊವೈಡರ್ ಆ್ಯಪ್' ಅಭಿವೃದ್ಧಿಪಡಿಸಿ ರೈತರಿಗೆ ಸಹಕಾರಿಯಾಗುವಂತೆ ಮಾಡಿತ್ತು. ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇಷ್ಟವಿಲ್ಲದಿದ್ದಾಗ ರೈತರು ನಿಗದಿತ ಆ್ಯಪ್​​ ಡೌನ್​ಲೋಡ್ ಮಾಡಿಕೊಂಡು ಸಹಾಯವಾಣಿಯನ್ನು ಸಂಪರ್ಕಿಸಿದರೆ ನೆರವು ಪಡೆಯುವ ವ್ಯವಸ್ಥೆಯನ್ನು ಎಪಿಎಂಸಿ ರಾಜ್ಯ ಉಗ್ರಾಣ ನಿಗಮ ಹಾಗೂ ಸಹಕಾರ ಇಲಾಖೆ ಜಂಟಿ ಸಹಯೋಗದಲ್ಲಿ ಮಾಡಿತ್ತು. ರೈತರು ಸೂಕ್ತ ಬೆಲೆ ಸಿಕ್ಕಿದ ತಕ್ಷಣ ಮಾರಾಟ ಮಾಡಬಹುದು ಅಥವಾ ಬೆಂಬಲ ಬೆಲೆ ಯೋಜನೆಯ ಸೌಲಭ್ಯ ಪಡೆಯಬಹುದು ಇನ್ನೂ ಹೆಚ್ಚು ಲಾಭದಾಯಕ ಬೆಲೆ ನಿರೀಕ್ಷೆಯಲ್ಲಿ ಯೋಜನೆಯ ಲಾಭ ಪಡೆದು ಕೊಳ್ಳಬಹುದು.

ಗೋದಾಮುಗಳ ಕೊರತೆ ಇಲ್ಲ :ರಾಜ್ಯದ ನಾನಾ ಜಿಲ್ಲೆಗಳಲ್ಲಿ ಎಪಿಎಂಸಿಗೆ ಸಾಗಿಸಿದ ಧಾನ್ಯಗಳನ್ನು ದಾಸ್ತಾನು ಮಾಡಲು ಆಯಾ ಪ್ರದೇಶದಲ್ಲಿ ಈಗಾಗಲೇ ಕಡಿಮೆ ಸಾಮರ್ಥ್ಯದ ಗೋದಾಮುಗಳಿವೆ. ಇವುಗಳನ್ನು ಆಯಾ ಜಿಲ್ಲೆಯ ರೈತರು ಪ್ರಸ್ತುತ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಖಾಲಿಬಿದ್ದಿರುವ ಗೋದಾಮುಗಳು: ಡಿಸೆಂಬರ್ ಮತ್ತು ಜನವರಿಯಲ್ಲಿ ಬೆಳೆ ಕಟಾವು ಮಾಡುವುದರಿಂದ ಬಹುತೇಕ ಗೋದಾಮುಗಳು ಖಾಲಿಬಿದ್ದಿವೆ. ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗೋದಾಮುಗಳು ಖಾಲಿಯಾಗಿಯೇ ಇವೆ. ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಜೊತೆ ಕೊರೊನಾ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ವಿವಿಗಳಿಗೆ ಸೇರಿದ ಫಾರಂಗಳ 639 ಎಕರೆ ಜಮೀನಿನಲ್ಲಿ ಗೋದಾಮುಗಳನ್ನು ನಿರ್ಮಾಣ ಮಾಡಲಾಗಿತ್ತು. ವಿಜಯಪುರ, ಬಸವಕಲ್ಯಾಣ, ಬೀದರ್, ಬಾಗಲಕೋಟೆ, ಹೊಸಪೇಟೆ, ಮಾಯಕೊಂಡ ಸೇರಿದಂತೆ ಹಲವೆಡೆ ಗೋದಾಮು ನಿರ್ಮಾಣ ಮಾಡಲಾಗಿದೆ. ಅದೇ ರೀತಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಸೇರಿದ ಗೋದಾಮುಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ಚಿತ್ರದುರ್ಗ, ಕಲಬುರ್ಗಿ, ಹಾವೇರಿ, ದಾವಣಗೆರೆ, ರಾಯಚೂರು, ಶಿವಮೊಗ್ಗ, ಯಾದಗಿರಿ ಜಿಲ್ಲೆಗಳಲ್ಲಿವೆ. ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ರಾಜ್ಯ ಉಗ್ರಾಣ ನಿಗಮಕ್ಕೆ ಸೇರಿದ ಗೋದಾಮುಗಳಿವೆ. ರಾಜ್ಯ ಸಹಕಾರ ಮಾರುಕಟ್ಟೆ ಮಾರಾಟ ಮಹಾಮಂಡಳದ ಗೋದಾಮುಗಳು ಹಾಸನ, ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿವೆ.' ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳನ್ನು ದಾಸ್ತಾನು ಮಾಡುವಷ್ಟು ಗೋದಾಮುಗಳು ಇಲ್ಲ. ಇರುವುದೇ ಶೇ.25 ರಷ್ಟು. ಇನ್ನೂ ಹೆಚ್ಚು ಗೋದಾಮುಗಳ ಅಗತ್ಯತೆ ಇದೆ ' ಎನ್ನುತಾರೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್.

ABOUT THE AUTHOR

...view details