ಕರ್ನಾಟಕ

karnataka

ETV Bharat / state

ಹಕ್ಕುಚ್ಯುತಿ ಮಂಡನೆ ವಿಚಾರ: ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ - ಶಾಸಕ ಬಿ.ಕೆ ಸಂಗಮೇಶ್

ಸದನದಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಶಾಸಕ ಆರಗ ಜ್ಞಾನೇಂದ್ರ ಅವರು ಹಕ್ಕುಚ್ಯತಿ ಮಂಡಿಸಿ ವಿಷಯ ಪ್ರಸ್ತಾವನೆ ಮಾಡಲು ಮುಂದಾದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

Assembly session
ವಿಧಾನಸಭೆ

By

Published : Mar 9, 2021, 6:19 PM IST

ಬೆಂಗಳೂರು: ಕಾಂಗ್ರೆಸ್​ ಶಾಸಕ ಬಿ.ಕೆ. ಸಂಗಮೇಶ್​ ಅವರು ಸದನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಕರಣ ವಿಧಾನ ಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲಕ್ಕೆ ಕಾರಣವಾಯಿತು. ಸರ್ಕಾರದ ನಡೆ ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್​ನ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಪ್ರಶ್ನೋತ್ತರ ಅವಧಿ ಮುಗಿದ ನಂತರ ಶಾಸಕ ಆರಗ ಜ್ಞಾನೇಂದ್ರ ಅವರು ಹಕ್ಕುಚ್ಯತಿ ಮಂಡಿಸಿ ವಿಷಯ ಪ್ರಸ್ತಾವನೆ ಮಾಡಲು ಮುಂದಾದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಗದ್ದಲದ ನಡುವೆಯೇ ಆರಗ ಜ್ಞಾನೇಂದ್ರ ಅವರು, ಸಂಗಮೇಶ್​ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದು ಸರಿಯಲ್ಲ. ಕರ್ನಾಟಕ ವಿಧಾನಸಭೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಎಲ್ಲರೂ ಸದನದ ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಭಾಧ್ಯಕ್ಷರಿಗೆ ಅವಕಾಶವಿದೆ ಎಂದರು.

ಅದರಲ್ಲೂ ಶಾಸಕರೊಬ್ಬರು ಸದನದ ಬಾವಿಗಿಳಿದು ಅಂಗಿಬಿಚ್ಚಿ ನಡೆದುಕೊಂಡಿದ್ದು ಸರಿಯಲ್ಲ. ಅವರ ವರ್ತನೆ ಅಶ್ಲೀಲವಾಗಿದೆ ಎಂದು ಆರೋಪಿಸಿದರು. ಆರಗ ಜ್ಞಾನೇಂದ್ರ ಅವರು ಅಶ್ಲೀಲ ಪದ ಬಳಸಿದ್ದಕ್ಕೆ ಕಾಂಗ್ರೆಸ್​ ಸದಸ್ಯರು ತೀವ್ರವಾಗಿ ವಿರೋಧಿಸಿದರು.

ಸಿಡಿಯನ್ನೇ ಬಿಟ್ಟಿರುವ ನಿಮಗೆ ಈಗ ಅಶ್ಲೀಲ ಪದ ಬಳಸಲು ನೈತಿಕತೆ ಇದೆಯೇ ಎಂದು ಕಾಂಗ್ರೆಸ್​ ಸದಸ್ಯರು ಪ್ರಶ್ನಿಸಿದರು. ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಈಗಾಗಲೇ ಸಂಗಮೇಶ್​ ಅವರನ್ನು ಸದನದಿಂದ ಅಮಾನತು ಮಾಡಿದ್ದೀರಿ. ಅವರು ಸದನದಲ್ಲಿ ಇಲ್ಲದಿರುವಾಗ ಹಕ್ಕು ಚ್ಯುತಿ ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ. ಈ ಹಿಂದೆ ಇಲ್ಲಿ ಯಾರೂ ಕೂಡ ಈ ರೀತಿ ನಡೆದುಕೊಂಡಿರಲಿಲ್ಲವೇ, ನಿಮ್ಮದೇ ಪಕ್ಷದ ಗೂಳಿಹಟ್ಟಿ ಶೇಖರ್​ ಬಟ್ಟೆಬಿಚ್ಚಿ ರಂಪಾಟ ಮಾಡಿದ್ದರು. ಆಗ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಅಮಾನತುಗೊಂಡಿರುವ ಸದಸ್ಯರೊಬ್ಬರು ಸದನದಲ್ಲಿ ಇಲ್ಲದಿರುವಾಗ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದು ಸದನದ ನಿಯಮಕ್ಕೆ ವಿರುದ್ಧವಾದದ್ದು. ಹಾಗಾಗಿ ಇದು ಚರ್ಚೆಗೆ ಯೋಗ್ಯವಲ್ಲ. ವಿಷಯ ಪ್ರಸ್ತಾವನೆಗೆ ಅವಕಾಶ ಕೊಡಬೇಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಆಗ ಸಭಾಧ್ಯಕ್ಷರು, ನಾನು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದೇನೆ. ಅವರು ಏನು ಮಾತನಾಡುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಿ. ಪರ-ವಿರೋಧ ಚರ್ಚೆ ಇದ್ದೇ ಇರುತ್ತದೆ. ಸಮಯ ಬಂದಾಗ ನೀವು ಕೂಡ ನಿಮ್ಮ ಅಭಿಪ್ರಯಾವನ್ನು ಹೇಳುವುದಕ್ಕೆ ಅವಕಾಶವಿದೆ ಎಂದರು.

ನಿಯಮ 140ರ ಪ್ರಕಾರ ಸದಸ್ಯರು ಸದನದಲ್ಲಿ ಇಲ್ಲದಿದ್ದಾಗಲೂ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬಹುದು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ನಾನು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್​ ಸದಸ್ಯರೊಬ್ಬರು ಸದನದಲ್ಲಿ ಅಂಗಿ ಬಿಚ್ಚಿ ನಡೆದುಕೊಂಡಿದ್ದು ಅತ್ಯಂತ ದುರದೃಷ್ಟಕರ. ಅವರು ಅಮಾನತುಗೊಂಡ ನಂತರವೂ ಪೀಠಕ್ಕೆ ಗೌರವ ಕೊಡದೆ ಅಗೌರವದಿಂದ ನಡೆದುಕೊಂಡಿದ್ದಾರೆ. ಈರೀತಿ ದುರ್ವರ್ತನೆ ತೋರಿದ್ದು ಸರಿಯಲ್ಲ. ಅಂತಹ ಸದಸ್ಯರು ಮಾಡಿದ್ದು ಸರಿ ಎಂದು ಸದಸ್ಯರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾತು ಮುಂದುವರೆಸಿದ ಆರಗ ಜ್ಞಾನೇಂದ್ರ, ಸದಸ್ಯರೊಬ್ಬರು ಅಂಗಿ ಬಿಚ್ಚಿ ನಡೆದುಕೊಂಡಿದ್ದನ್ನು ಇವರು ಸಮರ್ಥಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಕೇವಲ ಇಲ್ಲಿ ಮಾತ್ರ ಬೀದಿಗೆ ಬಂದಿಲ್ಲ. ದೇಶದ ಜನತೆ ಅವರ ಬಟ್ಟೆ ಬಿಚ್ಚಿ ಬೀದಿಗೆ ತಳ್ಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸದನದಲ್ಲಿ ಸದಸ್ಯರು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಬಹುದು. ಆದರೆ, ಈ ರೀತಿ ಅಂಗಿ ಬಿಚ್ಚಿ ನಡೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ. ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ನಮಗೂ ಗೊತ್ತು. ಅಂದು ಸಭಾಧ್ಯಕ್ಷರು ನಮ್ಮನ್ನು ಸದನದಿಂದ ಹೊರ ಹಾಕಲು ಪ್ರಯತ್ನಿಸಿದ್ದರು. ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಟ್ಟ ಮೇಲೆ ಎಲ್ಲರೂ ಸಹಕರಿಸಬೇಕು. ಇಲ್ಲಿ ಯಾರೋ ಒಂದಿಬ್ಬರು ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಗದ್ದಲ ತೀವ್ರಗೊಂಡಾಗ ಸಭಾಧ್ಯಕ್ಷರು ಸದನವನ್ನು ಕೆಲಕಾಲ ಮುಂದೂಡಿದರು.

ABOUT THE AUTHOR

...view details