ಬೆಂಗಳೂರು: ಕಾಂಗ್ರೆಸ್ನಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಸೆಲ್ಫ್ ಪ್ರಮೋಷನ್ ಪ್ರೋಗ್ರಾಂ ಆಗಿದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೆಲ್ಫ್ ಪ್ರಮೋಷನ್ಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟೀಕಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಮಾಡುವುದು ಬೇಡ ಎಂದು ಸರ್ಕಾರ ತಿಳಿಸಿದೆ. ಮೇಕೆದಾಟು ಯೋಜನೆ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಿದೆ. ಈಗ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗದುಕೊಳ್ಳಲಾಗಿದೆ. 31 ಜನರ ಮೇಲೆ ಕೇಸ್ ಆಗಿದೆ. ಕಾಂಗ್ರೆಸ್ ಜವಾಬ್ದಾರಿಯುತವಾಗಿರುವ ರಾಜಕೀಯ ಪಕ್ಷವಾಗಿದೆ. ಜನರ ಮುಂದೆ ಇವರ ನಾಟಕ ಈಗ ಬಯಲು ಆಗುತ್ತಿದೆ ಎಂದರು.
ಮೇಕೆದಾಟು ಕುಡಿಯುವ ನೀರಿನ ಯೋಜನೆ ಬೇಕು. ಈ ಭಾಗಕ್ಕೆ ನೀರಿನ ಅವಶ್ಯಕತೆಯಿದೆ. ರಾಜಕೀಯವಾಗಿ ಯಾವುದೇ ಕಾಯ್ದೆ ಮಾಡಿಲ್ಲ. ಒಂದು ವೇಳೆ ರಾಜಕೀಯ ಮಾಡಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಸಮಸ್ಯೆ ಆಗುತ್ತದೆ. ಜನರಿಗೆ ಅನುಕೂಲ ಮಾಡುವ ಬದಲು ಪೊಲಿಟಿಕಲ್ ಡ್ರಾಮಾ ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೆಳವಣಿಗೆಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ. ಇವರ ಯೋಜನೆಗಳು, ಇವರ ನಾಟಕಗಳು ಎಲ್ಲವೂ ಬಯಲಾಗುತ್ತದೆ ಎಂದು ಹೇಳಿದರು.