ಬೆಂಗಳೂರು :ರಾಮನಗರದ ಬೈರಮಂಗಲ ಜಲಾಶಯ ತಿರುವು ಕಾಲುವೆ ಯೋಜನೆಯಿಂದ ವೃಷಭಾವತಿ ನದಿ ಪತದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನದಿ ತಿರುವು ಯೋಜನೆಯನ್ನು ಪ್ರಶ್ನಿಸಿ ಯಲ್ಲಪ್ಪರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ವಿದ್ಯುಲತಾ ಅವರು ವಾದಿಸಿ, 110 ಕೋಟಿ ರೂಪಾಯಿ ವೆಚ್ಚದಲ್ಲಿ ನದಿ ತಿರುವು ಯೋಜನೆಯನ್ನು ರೂಪಿಸಿರುವುದು ಅತ್ಯಂತ ಅವೈಜ್ಞಾನಿಕ. ವೃಷಭಾವತಿ ನದಿಯ ಪಥವನ್ನು ರಾಮನಗರದ ಬೈರಮಂಗಲ ಜಲಾಶಯ ಬಳಿ ತಿರುವು ಕಾಲುವೆಯ ಮೂಲಕ ಬದಲಾಯಿಸಲು ಹೊರಟಿರುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಸಿಮೆಂಟ್ ಕಾಲುವೆ ಮೂಲಕ ನದಿ ಪಥವನ್ನು ಬದಲಾಯಿಸಲು ಮುಂದಾಗಿರುವ ಸರ್ಕಾರದ ಯೋಜನೆಯನ್ನು ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಸರ್ಕಾರದ ಪರ ವಕೀಲರು ಉತ್ತರಿಸಿ ಬೈರಮಂಗಲ ಜಲಾಶಯಕ್ಕೆ ವೃಷಭಾವತಿ ನದಿಯ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಜಲಾಶಯವನ್ನು ರಕ್ಷಿಸಲು ತಿರುವು ಕಾಲುವೆ ನಿರ್ಮಾಣ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಿಂದ ವೃಷಭಾವತಿ ನದಿಯ ಮಾರ್ಗ ಬದಲಾಗುವುದಿಲ್ಲ ಎಂದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ತಿರುವು ಕಾಲುವೆಯ ಯೋಜನೆಯಿಂದ ವೃಷಭಾವತಿ ನದಿಯ ಪಥ ಬದಲಾಗುವುದಿಲ್ಲ ಎಂಬುದನ್ನು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಮುಂದಿನ ಆದೇಶದವರೆಗೂ ಯೋಜನೆಗೆ ನೀಡಿರುವ ತಡೆಯಾಜ್ಞೆಯನ್ನು ವಿಸ್ತರಿಸಿರುವುದಾಗಿ ಸ್ಪಷ್ಟಪಡಿಸಿತು.