ಬೆಂಗಳೂರು :ಕಲುಷಿತಗೊಂಡಿರುವ ವೃಷಭಾವತಿ ನದಿ ಪುನಶ್ಚೇತನಕ್ಕೆ ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆ (ನೀರಿ) ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿತ್ತು. ಈ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ಸಂಬಂಧಿಸಿದ ಇಲಾಖೆ ಹಾಗೂ ಸಂಸ್ಥೆಗಳ ಜೊತೆ ಒಂದು ತಿಂಗಳೊಳಗೆ ಸಭೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವೃಷಭಾವತಿ ನದಿ ಪುನಶ್ಚೇತನ ಕೋರಿ ನಗರದ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಪೀಠಕ್ಕೆ ಮನವಿ ಮಾಡಿ, ವೃಷಭಾವತಿ ನದಿ ಪುನಶ್ಚೇತನಕ್ಕೆ ನೀರಿ ಸಂಸ್ಥೆ ನೀಡಿರುವ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಬಳಿಕ, ನೀರಿ ತಜ್ಞರು ಸಲ್ಲಿಸಿರುವ ಮಧ್ಯಂತರ ವರದಿ ಪರಿಶೀಲಿಸಿದ ಪೀಠ, ಸಂಸ್ಥೆ ಹಲವು ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಶಿಫಾರಸು ಮಾಡಿದೆ. ಆ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಹೈಕೋರ್ಟ್ ಸೂಚಿಸಿತು.
ಕಾರ್ಯವ್ಯಾಪ್ತಿ ಹಲವು ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದೆ. ಆದ್ದರಿಂದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಸಂಸ್ಥೆ ಹಾಗೂ ಇಲಾಖೆಗಳ ಜೊತೆ ಸಭೆ ನಡೆಸಬೇಕು. ಅಲ್ಲಿ ಶಿಫಾರಸುಗಳನ್ನು ಜಾರಿಗೊಳಿಸುವ ಕ್ರಮಗಳ ಕುರಿತು ತೀರ್ಮಾನಿಸಿ ಒಂದು ತಿಂಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ನೀರಿ ತನ್ನ ವರದಿಯಲ್ಲಿ ನದಿಪಾತ್ರವನ್ನು ಸಮಗ್ರವಾಗಿ ಸರ್ವೇ ನಡೆಸಬೇಕು ಎಂದು ಹೇಳಿದೆ. ಹೀಗಾಗಿ ಕಂದಾಯ ಇಲಾಖೆ ಸರ್ವೇ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ವೇ ನಡೆಸುವಾಗ ಒತ್ತುವರಿ, ನದಿಯ ಪಾತ್ರ, ಬಫರ್ ವಲಯ ಸೇರಿ ಹಲವು ಅಂಶಗಳನ್ನು ಪರಿಶೀಲಿಸಬೇಕು ಎಂದು ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.