ಬೆಂಗಳೂರು:ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆ ನಡೆದ ಜಿದ್ದಾಜಿದ್ದಿನಿಂದ ಕೂಡಿದ ಮೂರು ಕ್ಷೇತ್ರಗಳ ಉಪಸಮರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಸಮರ ಶಾಂತಿಯುತವಾಗಿ ನೆರವೇರಿದೆ. ಆದರೆ ಕೊರೊನಾ ಎರಡನೇ ಅಲೆ ಆರ್ಭಟದ ಮಧ್ಯೆ ನಡೆದ ಉಪಸಮರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಕೊರೊನಾ ಭೀತಿ ಹಿನ್ನೆಲೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಮುಖಮಾಡಿಲ್ಲ.
ಚುನಾವಣಾ ಆಯೋಗ ನೀಡಿದ ಅಂಕಿಅಂಶದ ಪ್ರಕಾರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಅತಿ ಕಡಿಮೆ ಮತದಾನ ನಡೆದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ಉಪಚುನಾವಣೆಯಲ್ಲಿ ಕೇವಲ 54.61% ಮತದಾನ ಆಗಿದೆ. 2019ರಲ್ಲಿ ನಡೆದ ಸಾರ್ವತ್ರಿಕಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 67.21% ಮತದಾನ ನಡೆದಿತ್ತು.