ಬೆಂಗಳೂರು:ರಾಷ್ಟ್ರಪತಿ ಆಯ್ಕೆಗೆ ನಡೆದ ಮತದಾನ ಪ್ರಕ್ರಿಯೆ ಇನ್ನು ಒಂದು ಗಂಟೆ ಇರುವಾಗಲೇ ಮುಕ್ತಾಯವಾಗಿದೆ. ಎಲ್ಲ 224 ಶಾಸಕರು ಹಾಗೂ ಇಬ್ಬರು ಸಂಸದರು ಮತದಾನ ಮಾಡಿ ತೆರಳಿದ್ದಾರೆ. 224 ಶಾಸಕರ ಜೊತೆ ರಾಜ್ಯಸಭೆ ಸದಸ್ಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ ವಿಧಾನಸೌಧದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮತದಾನ ಪ್ರಕ್ರಿಯೆ ನಡೆದಿದ್ದು, ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಎಲ್ಲರೂ ಮತದಾನ ಮಾಡಿದ್ದರು. ಮೊದಲ ಮತವನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾವೇರಿ ಚಲಾಯಿಸಿದರೆ, ಕಡೆಯ ಮತವನ್ನು ಕಾಂಗ್ರೆಸ್ ಸದಸ್ಯ ಡಾ. ಮಂಜುನಾಥ್ ಚಲಾಯಿಸಿದ್ದಾರೆ.
ಬಿಜೆಪಿಯಿಂದ 119, ಬಿಎಸ್ಪಿ, ಪಕ್ಷೇತರ ಹಾಗೂ ಸಭಾಧ್ಯಕ್ಷರಿಂದ ತಲಾ ಒಂದು ಮತ ಸೇರಿದಂತೆ ಒಟ್ಟು 122, ಕಾಂಗ್ರೆಸ್ 69 ಹಾಗೂ ಪಕ್ಷೇತರ ಸದಸ್ಯ ಸೇರಿ 70, ಜೆಡಿಎಸ್ನ 32 ಸದಸ್ಯರು ಸೇರಿ 224 ಶಾಸಕರು ಹಾಗೂ ಓರ್ವ ರಾಜ್ಯಸಭೆ ಸದಸ್ಯ, ಓರ್ವ ಲೋಕಸಭೆ ಸದಸ್ಯರು ಮತದಾನ ಮಾಡಿದ್ದಾರೆ.
ಐದು ಗಂಟೆ ನಂತರ ಮತ ಪೆಟ್ಟಿಗೆ ಸೀಲ್ ಮಾಡಿ ಸಂಜೆ 5:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗುತ್ತದೆ. ರಾತ್ರಿ 9:20ರ ವಿಮಾನದಲ್ಲಿ ದಿಲ್ಲಿಗೆ ಮತಪೆಟ್ಟಿಗೆ ಕೊಂಡೊಯ್ಯಲಾಗುತ್ತದೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಯ ಅಧಿಕಾರಿ ಮಹಾಂತೇಶ್ ಹಾಗೂ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಾಘವೇಂದ್ರ ಮತಪೆಟ್ಟಿಗೆ ಜತೆ ತೆರಳಲಿದ್ದಾರೆ.