ಬೆಂಗಳೂರು :ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಆಗಿರುವ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತೆ ಅವಕಾಶವನ್ನು ಚುನಾವಣಾಧಿಕಾರಿ ಕಲ್ಪಿಸಿಕೊಟ್ಟಿದ್ದಾರೆ. ಶಿವಾಜಿನಗರ, ಶಾಂತಿನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಈ ಸಂಬಂಧ ಪ್ರತಿಕಾ ಪ್ರಕಟಣೆ ಹೊರಡಿಸಿರುವ ಚುನಾವಣಾಧಿಕಾರಿಗಳು, ಮತದಾರರ ಹೆಸರು ಡಿಲೀಟ್ ಪ್ರಕ್ರಿಯೆಯ ಮುನ್ನ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಸ್ಥಳಾಂತರಿತ ಮತ್ತು ನಿಧನರಾದವರನ್ನು ಮತದಾರರೆಂದು ಗುರುತಿಸಲು ಸಾಕಷ್ಟು ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಹೆಸರು ಡಿಲೀಟ್ ಮಾಡುವ ಮೂಲಕ ಯಾರೊಬ್ಬ ಮತದಾರನು ಮತ ಹಕ್ಕಿನಿಂದ ವಂಚಿತನಾಗಬಾರದು. ಈ ನಿಟ್ಟಿನಲ್ಲಿ ಇನ್ನೊಂದು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮತದಾರರಿಗೆ ಸಾಮಾನ್ಯ ನೋಟಿಸ್ :ಶಾಂತಿನಗರ, ರಾಜರಾಜೇಶ್ವರಿ ನಗರ, ಶಿವಾಜಿನಗರ ಕ್ಷೇತ್ರದಲ್ಲಿ ಸ್ಥಳ ತಪಾಸಣೆ ಮತ್ತು ಮನೆ ಮನೆ ಸರ್ವೆ ಮೂಲಕ 16,040 ಸ್ಥಳಾಂತರಿತ ಹಾಗೂ ನಿಧನರಾದ ಮತದಾರರನ್ನು ಗುರುತಿಸಲಾಗಿದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೂ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಹೆಸರು ಡಿಲೀಟ್ ಆಗಿರುವುದನ್ನು ಸರಿಪಡಿಸಲು ಏಳು ದಿನಗಳ ಸಾಮಾನ್ಯ ನೋಟಿಸ್ ನೀಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿದರು.
ಮತದಾರರನ್ನು ಗುರುತಿಸುವ ಕಾರ್ಯ :ಆರ್.ಆರ್.ನಗರ, ಶಾಂತಿನಗರ ಮತ್ತು ಶಿವಾಜಿನಗರದಲ್ಲಿ ಸ್ಥಳಾಂತರಿತ ಹಾಗೂ ನಿಧನರಾದ ಮತದಾರರ ಹೆಸರು ಡಿಲೀಟ್ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಈಗಾಗಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾಕಷ್ಟು ಪರಿಶೀಲನೆಯ ಬಳಿಕ ಮೂರು ಕ್ಷೇತ್ರಗಳಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಹೆಸರನ್ನು ಗುರುತಿಸಲಾಗಿದೆ. ಅದರಂತೆ ಶಿವಾಜಿನಗರದಲ್ಲಿ ಸ್ಥಳಾಂತರಿತ ಮತದಾರರು 8,281, ಸಾವಿಗೀಡಾದ ಮತದಾರರು 1,684, ಶಾಂತಿನಗರದಲ್ಲಿ 2,247 ಸ್ಥಳಾಂತರಿತ ಹಾಗೂ 526 ನಿಧನ ಹೊಂದಿದ ಮತದಾರರು ಮತ್ತು ಆರ್.ಆರ್. ನಗರದಲ್ಲಿ ಸ್ಥಳಾಂತರಿತ 2,547, ನಿಧನ ಹೊಂದಿದ 755 ಮತದಾರರನ್ನು ಗುರುತಿಸಲಾಗಿದೆ.