ಬೆಂಗಳೂರು:ಸರ್ಕಾರದ ಅಧಿಕಾರಿಗಳಿಗೆ ಮಾತ್ರ ನೀಡುವ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಗುರುತಿನ ಚೀಟಿಯನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು, ಖಾಸಗಿಯವರಿಗೆ ನೀಡಲಾಗಿದೆ. ಇದರ ಹಿಂದಿರುವ ಉದ್ದೇಶ ಭ್ರಷ್ಟಾಚಾರ ಅಲ್ಲದೇ, ಮತ್ತೇನು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮತದಾರರ ಮಾಹಿತಿ ಕಳ್ಳತನದ ಆರೋಪ:ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗಮನಕ್ಕೆ ಬಾರದೇ ಒಂದು ಖಾಸಗಿ ಸಂಸ್ಥೆ ಮತದಾರರ ಮಾಹಿತಿ ಕಲೆಹಾಕಲು ಹೇಗೆ ಸಾಧ್ಯ?. ಸರ್ಕಾರ ಚುನಾವಣೆಯನ್ನು ಅಕ್ರಮ ಮಾರ್ಗದಿಂದ ಗೆಲ್ಲಲು ಹೊರಟಿದೆ. ಖಾಸಗಿ ಸಂಸ್ಥೆಯ ಮೂಲಕ ಮತದಾರ ಮಾಹಿತಿ ಕಳ್ಳತನ ಮಾಡುವುದು ಅಕ್ಷಮ್ಯ ಅಪರಾಧ. ಸರ್ಕಾರವೇ ಈ ಅಕ್ರಮದಲ್ಲಿ ಶಾಮೀಲಾಗಿದೆ. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಅಲ್ಲದೇ ಅವರ ಬಂಧನ ಆಗಬೇಕು. ಅವರ ಪಕ್ಷವೇ ಸಿಎಂ ವಿರುದ್ಧ ದೂರು ನೀಡಬೇಕು. ಈ ಸಂಬಂಧ ಎಫ್ಐಆರ್ ದಾಖಲಾಗದೇ ಇದ್ದರೆ ನಾವು ಮುಂದಿನ ಹೋರಾಟ ಕೈಗೊಳ್ಳುತ್ತೇವೆ. ಸಂಪೂರ್ಣ ತನಿಖೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ನಡೆಯಬೇಕು. ಪಾರದರ್ಶಕ ತನಿಖೆ ಆಗಬೇಕು. ಅಪರಾಧಕ್ಕೆ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಗುರುತಿನ ಚೀಟಿ ಪಡೆದಿರುವ ಬಿಜೆಪಿ ಕಾರ್ಯಕರ್ತರು:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ರಾಜಕೀಯ ಅಕ್ರಮ ರಾಜ್ಯದಲ್ಲಿ ಹೆಚ್ಚಾಗಿದೆ. ಸಾಕಷ್ಟು ಲಂಚಾವತಾರ ನೋಡಿದ್ದೇವೆ. ಆದರೆ ಈಗ ಬಿಜೆಪಿ ಕಾರ್ಯಕರ್ತರನ್ನು ಪರೋಕ್ಷವಾಗಿ ಆಹ್ವಾನಿಸಿ, ಜಾಹೀರಾತು ನೀಡಲಾಗಿತ್ತು. 15-20 ಸಾವಿರ ಮಂದಿ ಕಾರ್ಯಕರ್ತರು ಗುರುತಿನ ಚೀಟಿ ಪಡೆದಿದ್ದಾರೆ. ಮೇಲ್ನೋಟಕ್ಕೆ ಸಾರ್ವಜನಿಕ ಜಾಹೀರಾತು ಆಗಿದ್ದರೂ, ಇಲ್ಲಿ 1,500 ರೂ. ದಿನಗೂಲಿ ನೀಡುವ ಆಮಿಷ ಒಡ್ಡಿ ಪಕ್ಷದ ಕಾರ್ಯಕರ್ತರಿಂದ ಸಮೀಕ್ಷೆ ಮಾಡಿಸುತ್ತಿದ್ದಾರೆ.
ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಜತೆ ಖಾಲಿ ಮನೆಯನ್ನೂ ಗುರುತು ಮಾಡುತ್ತಿದ್ದಾರೆ. ಆ ಮನೆಯಲ್ಲಿ ಅಕ್ರಮ ಮತದಾರರನ್ನು ಸೃಷ್ಟಿಸಿ ಅಕ್ರಮ ಮತದಾನಕ್ಕೆ ಸಹ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ಅಕ್ರಮಕ್ಕೆ ಇದಕ್ಕಿಂತ ದೊಡ್ಡ ಅಕ್ರಮ ಇದಾಗಿದೆ. ಇದೀಗ ಈ ಪರವಾನಗಿಯನ್ನು ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್ ರದ್ದುಪಡಿಸಿದ್ದಾರೆ.
ಚುನಾವಣಾ ಅಕ್ರಮದ ತನಿಖೆ ಆಗಲಿ: ಇದನ್ನು ನಡೆಸಲು ಅವಕಾಶ ಹೇಗೆ ನೀಡಿದಿರಿ. ಅಕ್ರಮವಾಗಿದ್ದರೆ ದಾಖಲೆ ಅಪ್ಲೋಡ್ ಆಗಿದ್ದನ್ನು ಏನು ಮಾಡುತ್ತೀರಿ? ಯಾರನ್ನು ಬಂಧಿಸಿದ್ದೀರಿ? ಏನು ಕ್ರಮ ಆಗಿದೆ?. ಹೊಂಬಾಳೆ ಅಂತ ಇದ್ದ ಸಂಸ್ಥೆ ಈಗ ಚಿಲುಮೆ ಆಗಿದೆ. ಚುನಾವಣಾ ಅಕ್ರಮದ ತನಿಖೆ ಆಗಬೇಕು. ಬಿಬಿಎಂಪಿ ಚುನಾವಣಾ ಅಕ್ರಮದ ಸೂಕ್ತ ತನಿಖೆ ಆಗಬೇಕು. ಕೂಡಲೇ ಚುನಾವಣಾ ಆಯೋಗದವರು ಇದನ್ನು ಮುಖ್ಯ ನ್ಯಾಯಮೂರ್ತಿ ಮೂಲಕ ತನಿಖೆಗೆ ಮಾಡಿಸಲಿ ಎಂದು ಮನವಿ ಮಾಡಿದರು.
ಇಂತಹ ದುಷ್ಟ ವ್ಯಕ್ತಿಗಳನ್ನು ಬೆಳಕಿಗೆ ತರಬೇಕು. ದೇಶದ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಲೂಟಿಯಾಗುತ್ತಿದೆ. ಇದರ ಸೂಕ್ತ ತನಿಖೆ ಆಗಬೇಕು. ಸಮೀಕ್ಷೆ ಮಾಡುವವರಿಗೆ 1500 ರೂ. ನೀಡುತ್ತಾರೆ. ಆದರೆ ಮಾಹಿತಿ ಉಚಿತವಾಗಿ ನೀಡುತ್ತಾರಂತೆ. ಇದು 40% ಕಮೀಷನ್ ಸರ್ಕಾರದ ಕೈವಾಡ ಆಗಿದೆ. ಮಲ್ಲೇಶ್ವರ 15, 16ನೇ ಮುಖ್ಯ ರಸ್ತೆ ವ್ಯಾಪ್ತಿಯಲ್ಲೇ ಎಲ್ಲಾ ಭ್ರಷ್ಟಾಚಾರದ ಮೂಲ ಇದೆ. ಸೂಕ್ತ ತನಿಖೆ ಆಗಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಇದನ್ನೂ ಓದಿ:ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ
ಕೆಲ ಮತವನ್ನು ಬೇರೆ ಬೂತ್‌ಗೆ ವರ್ಗಾಯಿಸುತ್ತಿದ್ದಾರೆ. ಒಟ್ಟಾರೆ ವ್ಯವಸ್ಥಿತ ಅಕ್ರಮ ಇದಾಗಿದೆ. ಮತದಾರರ ಮಾಹಿತಿ ಕಲೆ ಹಾಕುವ ಹಾಗೂ ಬೇಡದವರ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಏಜೆನ್ಸಿ ಮಾಲೀಕರ ವಿರುದ್ಧ ದೂರು ನೀಡುತ್ತೇವೆ. ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಸದ್ಯ ಸರ್ಕಾರ ನೀಡುವ ಮಾಹಿತಿ ಪಡೆಯುತ್ತೇವೆ. ಆ ನಂತರ ನಮ್ಮ ಹೋರಾಟ ನಿರ್ಧರಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.