ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಮತದಾರರ ಗುರುತಿನ ಚೀಟಿ ನಾಪತ್ತೆ ಆರೋಪದ ಕುರಿತು ವಿಶೇಷ ತನಿಖಾ ದಳ ರಚಿಸಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಟಿಜನ್ಸ್ ರೈಟ್ಸ್ ಫೌಂಡೇಶನ್ (ಸಿಆರ್ಎಫ್) ಪತ್ರ ಬರೆದಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಹಗರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ಅದರ ಮೇಲ್ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳು ವಹಿಸಬೇಕು. ಆ ಮೂಲಕ ಹಗರಣದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳನ್ನು ಬಯಲಿಗೆ ಎಳೆಯಬೇಕು. ಬೆಂಗಳೂರು ವ್ಯಾಪ್ತಿಯಲ್ಲಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮತ್ತು ಜಿಲ್ಲಾ ಚುನಾವಣಾಧಿಕಾರಿಯು (ಡಿಇಒ) ಸರ್ಕಾರೇತರ ಸಂಸ್ಥೆಯಾದ ʼಚಿಲುಮೆʼ ಜೊತೆ ಕೈಜೋಡಿಸಿ, ಕ್ರಿಮಿನಲ್ ಪಿತೂರಿ ನಡೆಸುವ ಮೂಲಕ ಮತದಾರರ ಪಟ್ಟಿಯನ್ನು ತಿರುಚುವ ಕೃತ್ಯ ಎಸಗಿದ್ದು, ಈ ಮೂಲಕ ನೇರವಾಗಿ ಚುನಾವಣಾ ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಉಸ್ತುವಾರಿಯಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಚುನಾವಣಾಧಿಕಾರಿಯಾಗಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಬೃಹತ್ ಜವಾಬ್ದಾರಿಯನ್ನು ಚಿಲುಮೆ ಉಚಿತವಾಗಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕೆ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲು ಚಿಲುವೆಗೆ ಬಿಬಿಎಂಪಿ ಅನುಮತಿಸಿದೆ. ಆ ನಂತರ ಅದನ್ನು 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಿ, ಆಗಸ್ಟ್ 20ರಂದು ಸರ್ಕಾರಿ ಆದೇಶ ಮಾಡಲಾಗಿದೆ. ಚಿಲುಮೆ ಸಂಸ್ಥೆಯ ಹಿನ್ನೆಲೆ ಪರಿಶೀಲಿಸದೇ ಬಿಬಿಎಂಪಿಯು ತಕ್ಷಣ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಹೊಣೆಗಾರಿಕೆ ಚಿಲುಮೆ ಸಂಸ್ಥೆಗೆ ನೀಡಲಾಗಿದೆ.