ಬೆಂಗಳೂರು:ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಿಲ್ಲ ಎಂದು ದೂರುವ ಬದಲು ಮೊದಲು ನಿಮ್ಮ ಮತದಾನದ ಹಕ್ಕು ಚಲಾವಣೆ ಮಾಡುವ ನಿಮ್ಮ ಕೆಲಸವನ್ನು ಮಾಡಿ ಎಂದು ಮೊದಲ ಮತ ಹಾಕಿದ ಮತದಾರ ಚೇತನ್ ಕರೆ ನೀಡಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ಗಿರಿನಗರದ ವಿಜಯ ಭಾರತಿ ಕಾಲೇಜಿನ ಮತಗಟ್ಟೆ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದ ಚೇತನ್ 7 ಗಂಟೆಗೆ ಸರಿಯಾಗಿ ಮತಗಟ್ಟೆ ತೆರೆಯುತ್ತಿದ್ದಂತೆ ಮೊದಲ ಮತ ಚಲಾವಣೆ ಮಾಡಿದರು.
ನಂತರ ಈಟಿವಿ ಭಾರತ್ ಜೊತೆ ಮಾತನಾಡಿ, ಈ ಬೂತ್ನಲ್ಲಿ ಮೊದಲ ಮತ ಹಾಕಿದ್ದು ಖುಷಿ ನೀಡಿದೆ. ಪ್ರತಿ ಬಾರಿ ಸಂಜೆ ಬಂದು ಮತ ಹಾಕುತ್ತಿದ್ದೆ. ಆದರೆ ಈ ಬಾರಿ ಮೊದಲ ಮತ ಹಾಕಬೇಕು ಎಂದು 1 ಗಂಟೆ ಮೊದಲೇ ಬಂದು ಸಾಲಿನಲ್ಲಿ ನಿಂತು ಮತ ಹಾಕಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾವುದೇ ಕೆಲಸ ಇದ್ದರೂ ಕೂಡ ದಯವಿಟ್ಟು ಮತದಾನ ಮಾಡಿ. ನಂತರ ಹೋಗಿ ಮತ ಹಾಕದೇ ಅವರು ಸರಿಯಾಗಿ ಕೆಲಸ ಮಾಡಿಲ್ಲ ಇವರು ಸರಿಯಾಗಿ ಕೆಲಸ ಮಾಡಿಲ್ಲ ಎನ್ನಬೇಡಿ. ಮೊದಲು ನಿಮ್ಮ ಕೆಲಸ ನೀವು ಮಾಡಿ. ನಂತರ ನಿಮ್ಮ ನಿಮ್ಮ ಕೆಲಸ ಮಾಡಿ ಎಂದು ಕರೆ ನೀಡಿದರು.
ಪ್ರತಿ ಚುನಾವಣೆಯಲ್ಲಿಯೂ ಬೆಂಗಳೂರಿನ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಈ ಬಾರಿ ಬಿಸಿಲು ಹೆಚ್ಚಿರುವ ಜೊತೆ ಸರಣಿ ರಜೆ ಇವೆ. ಹಾಗಾಗಿ ಮತದಾನದ ಪ್ರಮಾಣ ಕಡಿಮೆ ಆಗಬಹುದು. ಆದರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಶೇ. 60-70 ಮತದಾನವಾಗಬಹುದು ಎಂದರು.
ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವತಿ ಸಹ ತನ್ನ ಅನಿಸಿಕೆಯನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.