ಬೆಂಗಳೂರು: ಏನೋ ಒಂದು ದೊಡ್ಡ ಹಗರಣ ಸಿಕ್ತು ಅಂತ ಕಾಂಗ್ರೆಸ್ನವರು ಅಂದುಕೊಂಡಿದ್ದಾರೆ. ಆದರೆ, ಈ ಪ್ರಕರಣ ಅವರಿಗೇ ತಿರುಗುಬಾಣ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸ ಬಳಿ ಮಾತನಾಡಿದ ಅವರು, ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಿರುವ ಪ್ರಕರಣದ ತನಿಖೆಯನ್ನು ವಿಸ್ತರಿಸಿ 2013ರಿಂದ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಯಾವಾಗ ಕೊಡಲಾಗಿದೆ. ಏನು ಆದೇಶ ಕೊಡಲಾಗಿತ್ತು. ಯಾವ ಉದ್ದೇಶಕ್ಕಾಗಿ ನೀಡಲಾಗಿತ್ತು ಎಂಬ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಎಲ್ಲಾ ಸತ್ಯಾಸತ್ಯತೆ ಹೊರಬರಬೇಕು. ಆಗ ಪರಿಪೂರ್ಣವಾದ ಚಿತ್ರಣ ದೊರೆಯುತ್ತದೆ ಎಂದು ತಿಳಿಸಿದರು.
ನಮ್ಮ ಆದೇಶ ಮತ್ತು ಅವರ ಆದೇಶದಲ್ಲಿ ಬಹಳ ವ್ಯತ್ಯಾಸ ಇದೆ. ನಾವು ಜಾಗೃತಿ ಮೂಡಿಸಬೇಕು ಎಂದು ಆದೇಶ ಕೊಟ್ಟಿದ್ದೇವೆ. ಆದರೆ ಅವರು ತಮ್ಮ ಆಡಳಿತಾವಧಿಯಲ್ಲಿ ತಹಶೀಲ್ದಾರ್ಗೆ ಬಿಎಲ್‌ಒ ನೇಮಕ ಮಾಡುವಂತೆ ಆದೇಶ ಕೊಟ್ಟಿದ್ದಾರೆ. ಹದ್ದು ಮೀರಿ ದುರುಪಯೋಗ ಆಗಿದೆ. ನಾವು ಚುನಾವಣಾಧಿಕಾರಿಗೆ ದೂರು ಕೊಟ್ಟಿದ್ದೇವೆ. ದೂರಿನಲ್ಲಿ ಸಿದ್ದರಾಮಯ್ಯ ಹೆಸರನ್ನೂ ಸೇರಿಸಿದ್ದೇವೆ. ಚಿಲುಮೆಗೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್. ಎಲೆಕ್ಷನ್ ಕಮಿಷನ್ ಮಾಡುವ ಕೆಲಸದ ಹೊಣೆಯನ್ನು ಕಾಂಗ್ರೆಸ್ನವರು ಚಿಲುಮೆಗೆ ಕೊಟ್ಟಿದ್ದರು ಎಂದು ತಿರುಗೇಟು ನೀಡಿದರು.