ಬೆಂಗಳೂರು: ಬಿಎಂಟಿಸಿ ನಿಗಮದ ಪರಿಸ್ಥಿತಿ ಸದ್ಯ 'ಬಿಸಿ ತುಪ್ಪ ನುಂಗುವ ಹಾಗೂ ಇಲ್ಲ, ಉಗುಳುವ ಹಾಗೂ ಇಲ್ಲ' ಎಂಬಂತಾಗಿದೆ. ಕೋಟಿ ಕೋಟಿ ರೂ ತೆತ್ತು ಖರೀದಿ ಮಾಡಿರುವ ಬಸ್ಗಳಿಂದ ನಿಗಮಕ್ಕೆ ನಯಾಪೈಸೆ ಲಾಭ ಬರುತ್ತಿಲ್ಲವಂತೆ. ಹಾಗಂತ ಬಸ್ ಓಡಿಸಿಲ್ಲ ಅಂದ್ರೆ ಜನರ ಕೋಪಕ್ಕೂ ಗುರಿಯಾಗಬೇಕಾದ ಪರಿಸ್ಥಿತಿ ಇದೆ.
ವೋಲ್ವೋ ಬಸ್ ಪ್ರಯಾಣಿಕರನ್ನು ಸೆಳೆಯಲು ಎಷ್ಟೇ ಕಸರತ್ತು ಮಾಡುತ್ತಿದ್ದರೂ ಪ್ರಯೋಜವಾಗಿಲ್ಲ. ಹೀಗಾಗಿ ನಿಗಮಕ್ಕೆ ಈ ಐಷಾರಾಮಿ ಬಸ್ಗಳ ಸಹವಾಸ ಸಾಕು ಅನ್ನಿಸಿಬಿಟ್ಟಿದೆ. ಇವುಗಳ ನಿರ್ವಹಣೆ ನಿಗಮಕ್ಕೆ ತಲೆನೋವು ತಂದಿದ್ದು, ಪ್ರತಿ ವರ್ಷ ಕೋಟಿ ಕೋಟಿ ರೂ ಹೊರೆ ಬೀಳುತ್ತಿದೆ.
ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದ ಕಾಲಾವಧಿಯಲ್ಲಿ ಬಿಎಂಟಿಸಿಗೆ 840 ಐಷಾರಾಮಿ ಬಸ್‌ಗಳು ಸೇರ್ಪಡೆಯಾದ್ದವು. ಪ್ರತಿ ವರ್ಷ ಈ ವೋಲ್ವೋ ಬಸ್ ಕಾರ್ಯಾಚರಣೆಯಿಂದ 80 ರಿಂದ 90 ಕೋಟಿ ರೂ ನಷ್ಟವಾಗಿದೆ. ಪ್ರತಿ ಕಿಮೀ ಮೀಟರ್ ಕಾರ್ಯಾಚರಣೆಯಿಂದ 70 ರೂ ಆದಾಯ ಬರುತ್ತಿದೆ. ಆದರೆ ಕಾರ್ಯಾಚರಣೆ ವೆಚ್ಚವೇ 85 ರೂ ಬರುತ್ತಿದೆ. ಆದರೆ, ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದ ಮೂಲೆ ಸೇರಿದ್ದ ಈ ಬಸ್‌ಗಳು ನೂರಾರು ಕೋಟಿ ನಷ್ಟ ಉಂಟು ಮಾಡಿವೆ. ಬಿಎಂಟಿಸಿ ನೀಡಿರುವ ಅಂಕಿ ಅಂಶಗಳ ಪ್ರಕಾರ, 2020-21 ರಲ್ಲಿ 281 ಕೋಟಿ ಹಾಗೂ 2021- 22 ರ ಸಾಲಿನಲ್ಲಿ 268 ಕೋಟಿ ನಷ್ಟವಾಗಿದೆ.
ಪ್ರತಿ ವರ್ಷ ಬಿಎಂಟಿಸಿಗೆ ಆಗಿರುವ ನಷ್ಟದ ವಿವರ ಹೀಗಿದೆ..:
- 2015-2016-40 ಕೋಟಿ
- 2016-2017-45 ಕೋಟಿ
- 2017-2018-50 ಕೋಟಿ
- 2018-2019-90 ಕೋಟಿ
- 2020-2021-281 ಕೋಟಿ
- 2021-2022-268 ಕೋಟಿ