ಬೆಂಗಳೂರು:ಕಂಪನಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿದ ತಕ್ಷಣ ನಿಗಮ ಆರಂಭಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ, ಒಕ್ಕಲಿಗ ಸಮಾಜದಲ್ಲಿ ಅನೇಕ ಬಡವರಿದ್ದಾರೆ. ಅವರಿಗೆ ಶಿಕ್ಷಣ ಹಾಗೂ ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡಲು ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಸರ್ಕಾರ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡಿತು. ಆದರೆ ನಿಗಮದಿಂದ ಒಬ್ಬನಿಗೂ ನೆರವು ಸಿಕ್ಕಿಲ್ಲ. ಒಕ್ಕಲಿಗರಲ್ಲಿ ಬಡವರು, ಕೂಲಿ ಕಾರ್ಮಿಕರು ಇದ್ದಾರೆ. ಎರಡು ವರ್ಷದ ಹಿಂದೆ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ಕೊಟ್ಟಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
2021-22ನೇ ಬಜೆಟ್ನಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವ ಪ್ರಸ್ತಾಪ ಇದೆ. 500 ಕೋಟಿ ರೂ. ಮೀಸಲಿಡುವ ಪ್ರಸ್ತಾಪ ಇತ್ತು. ಈ ವರ್ಷದ ಬಜೆಟ್ನಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಈಗಾಗಲೇ ಘೋಷಿಸಲಾಗಿದೆ. ಪ್ರಸಕ್ತ 100 ಕೋಟಿ ಮೊತ್ತದಲ್ಲಿ ಕಾರ್ಯಕ್ರಮ ರೂಪಿಸಲಾಗುವುದೆಂದು ಹೇಳಲಾಗಿದೆ. ಒಟ್ಟು ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 600 ಕೋಟಿ ರೂ. ಘೋಷಿಸಲಾಗಿದೆ. ಆದ್ರೆ ಇದುವರೆಗೆ ಒಂದು ರೂ. ಸಹ ಒಬ್ಬ ಬಡ ಒಕ್ಕಲಿಗನಿಗೆ ಸಿಕ್ಕಿಲ್ಲ. ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ಇನ್ನೂ ನೋಂದಣಿಯೇ ಮಾಡಿಲ್ಲ. ಘೋಷಣೆ ಮಾಡಿ ಎರಡು ವರ್ಷ ಆಗಿದೆ, 600 ಕೋಟಿ ಇಟ್ಟಿದ್ದಾರೆ. ಆದ್ರೆ ನಿಗಮ ಇನ್ನೂ ನೋಂದಣಿ ಮಾಡಿಲ್ಲ ಎಂದು ಕಿಡಿ ಕಾರಿದರು.