ಬೆಂಗಳೂರು: "ನಾನು ವೈಯಕ್ತಿಕ ಹಿತಾಸಕ್ತಿಗೆ ಎಂದೂ ರಾಜಕೀಯ ಮಾಡಿದವನಲ್ಲ. ಸಾಮಾಜಿಕ ಬದಲಾವಣೆಗಾಗಿ ರಾಜಕೀಯಕ್ಕೆ ಬಂದವನು. ಸಾಮಾಜಿಕ ನ್ಯಾಯದ ಪರವಾದ ನನ್ನ ಧ್ವನಿಯನ್ನು ಎಂದೂ ಅಡಗಿಸಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವ ಅಧಿಕಾರದ ಮೇಲೂ ಲಾಭಿ ನಡೆಸಿದ ಇತಿಹಾಸವಿಲ್ಲ. ಅದರ ಮೇಲೆ ಆಸೆಯೂ ನನಗಿಲ್ಲ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಈಡಿಗ, ಬಿಲ್ಲವ,ನಾಮಧಾರಿ, ದೀವರ ಮಹಾಮಂಡಳಿ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, "ನಾನು ಅಸಮಾಧಾನದ ಬಗ್ಗೆ ಮಾತನಾಡುವುದಿಲ್ಲ. ವಿಶೇಷ ಸಭೆಯಲ್ಲಿ ನಾನು ಏನು ಮಾತನಾಡಿದ್ದೇನೋ ಅದಕ್ಕೆ ನಾನು ಬದ್ಧ. ಅದನ್ನು ವಾಪಸ್ ಪಡೆದುಕೊಳ್ಳುವ ಮಾತೇ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದರು.
"ನಾನು ಹೇಳದ ಮೇಲೆ ಅದು ನನ್ನ ಮಾತಲ್ಲ. ನಾನು ಹೇಳಿದ ಮೇಲೆ, ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ. ಮಹಾಮಂಡಳಿಯ ಸಭೆಗೆ ನನ್ನನ್ನು ಕರೆದಿದ್ದರು. ಅಲ್ಲಿ ಹೋಗಿ ಮಾತನಾಡಿದ್ದೇನೆ. ಇದನ್ನು ಯಾರೋ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದರು.
ಸಿದ್ದರಾಮಯ್ಯ ವಿರುದ್ಧ ಸಭೆಯಲ್ಲಿ ಅಸಮಾಧಾನ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. "ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ವಿಶೇಷವಾಗಿ ನಮ್ಮ ಸಮುದಾಯ ಯಾಕೆ ಮುಂದೆ ಬರುತ್ತಿಲ್ಲ. ಈ ಬಗ್ಗೆ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಸಮುದಾಯದವರು ಅವಕಾಶ ವಂಚಿತರಾಗುತ್ತಿದ್ದಾರೆ. ಇದರ ಹಿಂದೆ ಯಾರದೋ ಷಡ್ಯಂತ್ರ ಇದೆ" ಎಂದು ಟೀಕಿಸಿದ್ದರು.
"ಕೆಲವರು ಹೇಳಬಹುದು ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರು. ನೀವು ಕೂಡ ಹಿಂದುಳಿದ ವರ್ಗದವರು. ನಾವೆಲ್ಲ ಒಟ್ಟಿಗೆ ಸೇರಬೇಕೆಂದು ಹೇಳಬಹುದು. ಈ ಸಂಬಂಧ ಎಲ್ಲರೂ ಒಟ್ಟಿಗೆ ಸೇರಿ 2013ರಲ್ಲಿ ಬೆಂಬಲ ನೀಡಿದ್ದೇವು. ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳ ಮುಂದೆ ಕೈ ಚಾಚುವರು ನಾವಲ್ಲ. ಸ್ವಾರ್ಥಕ್ಕೋಸ್ಕರ ನಾವು ಇದುವರೆಗೆ ಏನನ್ನೂ ಕೇಳಿದವರಲ್ಲ" ಎಂದು ಹೇಳಿದ್ದರು.