ಕರ್ನಾಟಕ

karnataka

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಆಯ್ಕೆ.. ಹಾಲಿ ಅಧ್ಯಕ್ಷ ರಂಗನಾಥ್ ಕನಸು ಭಗ್ನ

By

Published : Dec 20, 2021, 8:25 AM IST

ಬೆಂಗಳೂರು ವಕೀಲರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ಭಾನುವಾರ ನಗರದ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಸದಸ್ಯತ್ವ ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಮತದಾನ ಜರುಗಿತು.

Bengaluru Lawyers Association election
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಆಯ್ಕೆ

ಬೆಂಗಳೂರು:ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) 2021-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದು, ಮರು ಆಯ್ಕೆ ಬಯಸಿದ್ದ ಹಾಲಿ ಅಧ್ಯಕ್ಷ ಎ.ಪಿ ರಂಗನಾಥ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಬೆಂಗಳೂರು ವಕೀಲರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ನಿನ್ನೆ ನಗರದ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಸದಸ್ಯತ್ವ ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಮತದಾನ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ 4, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 8 ಮಂದಿ ಹಾಗೂ ಖಜಾಂಚಿ ಸ್ಥಾನಕ್ಕೆ 10 ಮಂದಿ ಸೇರಿದಂತೆ 134 ಮಂದಿ ಭವಿಷ್ಯ ನಿನ್ನೆ ಸಂಜೆಯೇ ಹೊರಬಿದ್ದಿತು. ಸಂಜೆಯೇ ಮತಗಳ ಎಣಿಕಾ ಕಾರ್ಯವನ್ನು ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

ವಿವೇಕ್ ರೆಡ್ಡಿ ಪರವಾಗಿ 4,804 ಮತಗಳು, ಎ.ಪಿ.ರಂಗನಾಥ್ ಪರವಾಗಿ 2,894 ಮತಗಳು, ರಾಜಣ್ಣ ಪರವಾಗಿ 2,545 ಮತಗಳು ಹಾಗು ಹೆಚ್.ಸಿ.ಶಿವರಾಮು ಪರವಾಗಿ 878 ಮತಗಳು ಚಲಾವಣೆಯಾಗಿವೆ. ನೂತನ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ 1,900ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಸ್ಪರ್ಧೆಯೊಡ್ಡಿದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಅಧ್ಯಕ್ಷ ಹುದ್ದೆಗೆ ಹಾಲಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಎಎಬಿ ಮಾಜಿ ಅಧ್ಯಕ್ಷ ಹೆಚ್.ಸಿ ಶಿವರಾಮು ಹಾಗೂ ಆರ್. ರಾಜಣ್ಣ ನಡುವೆ ತೀವ್ರ ಸ್ಪರ್ಧೆ ನಡೆದಿದ್ದು,‌ ಎಲ್ಲ ಅಭ್ಯರ್ಥಿಗಳಿಂದಲೂ ಬಿರುಸಿನ ಪ್ರಚಾರ ಕಾರ್ಯವನ್ನೂ ನಡೆಸಲಾಗಿತ್ತು. ಅಂತಿಮವಾಗಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿವೇಕ್ ಸುಬ್ಬಾರೆಡ್ಡಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ವಕೀಲರ ಸಂಘ ಎನಿಸಿದ್ದು, ಆಡಳಿತ ಮಂಡಳಿ ಚುನಾವಣೆ ಪ್ರತಿಷ್ಠೆಯಾಗಿದೆ. ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನಗಳೊಂದಿಗೆ ಹೈಕೋರ್ಟ್​ನ 7, ಮೆಯೊಹಾಲ್ ಮತ್ತು ಮ್ಯಾಜಿಸ್ಟ್ರೇಟ್​ ಕೋರ್ಟ್​ ಘಟಕಗಳ ತಲಾ 5 ಹಾಗೂ ಸಿಟಿ ಸಿವಿಲ್ ಕೋರ್ಟ್​ನ 12 ಕಾರ್ಯಕಾರಿ ಸದಸ್ಯ ಸಮಿತಿ ಸ್ಥಾನಗಳಿಗೂ ಚುನಾವಣೆ ನಡೆಯಿತು. ಗೆದ್ದ ಅಭ್ಯರ್ಥಿಗಳ ಸಮಗ್ರ ವಿವರ ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

ನೂತನ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಆಯ್ಕೆಯಾಗುತ್ತಿದ್ದಂತೆ ವಕೀಲರ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು, ವಿವೇಕ್ ಬೆಂಬಲಿಗ ವಕೀಲರು ಬಂದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಇದನ್ನೂ ಓದಿ:ಎಂಇಎಸ್ ಉದ್ಧಟತನಕ್ಕೆ ಖಂಡನೆ : ಇಂದು ಕರವೇ ನಾರಾಯಣಗೌಡ ಬಣದಿಂದ ಸುವರ್ಣ ಸೌಧಕ್ಕೆ ಮುತ್ತಿಗೆ

ABOUT THE AUTHOR

...view details