ಆದಿಚುಂಚನಗಿರಿ ಮಠಕ್ಕೆ ಭೇಟಿ.. ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಶಾ ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದ ಸಂಘಟನೆಗೆ ಆಗಮಿಸಿರುವ ಬಿಜೆಪಿಯ ಚುನಾವಣಾ ಚಾಣಕ್ಯ ಒಕ್ಕಲಿಗರ ಪರಮೋಚ್ಚ ಮಠದ ಮಠಾಧಿಪತಿಗಳನ್ನು ಭೇಟಿ ಮಾಡುವ ಮೂಲಕ ಒಕ್ಕಲಿಗರ ಮತಗಳ ಸೆಳೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ.
ವಿಜಯನಗರದಲ್ಲಿರುವ ಆದಿಚುಂಚನಗರಿ ಶಾಖಾ ಮಠಕ್ಕೆ ಅಮಿತ್ ಶಾ ಭೇಟಿ ನೀಡಿದರು. ಅವರ ಜೊತೆ ಕಂದಾಯ ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ತೇಜಸ್ವಿ ಸೂರ್ಯ, ಅಮಿತ್ ಶಾ ಜೊತೆಯಲ್ಲಿ ಮಠಕ್ಕೆ ಆಗಮಿಸಿದ್ದರು.
ನಿರ್ಮಲಾನಂದ ಶ್ರೀಗಳಿಗೆ ಗೌರವ ಸಲ್ಲಿಕೆ ಮಾಡಿದ ಅಮಿತ್ ಶಾ, ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ನಂತರ ಮಠದ ವತಿಯಿಂದಲೂ ಅಮಿತ್ ಶಾ ಅವರಿಗೆ ಗೌರವ ಸಲ್ಲಿಕೆ ಮಾಡಲಾಯಿತು. ನಂತರ ಶ್ರೀಗಳ ಜೊತೆ ಕೆಲ ಕಾಲ ಅಮಿತ್ ಶಾ ಮಾತುಕತೆ ನಡೆಸಿದರು.
ಹಳೆ ಮೈಸೂರು ಭಾಗದಲ್ಲಿ ಆದಿಚುಂಚನಗಿರಿ ಮಠ ಹೆಚ್ಚಿನ ಪ್ರಭಾವ ಹೊಂದಿದ್ದು, ಈ ಭಾಗವನ್ನೇ ಟಾರ್ಗೆಟ್ ಮಾಡಿಕೊಂಡು ಬಂದಿರುವ ಅಮಿತ್ ಶಾ, ಮಂಡ್ಯದ ಸರ್ಕಾರಿ ಕಾರ್ಯಕ್ರಮದಲ್ಲಿಯೂ ಆದಿಚುಂಚನಗಿರಿ ಶ್ರೀಗಳ ಜೊತೆ ವೇದಿಕೆ ಹಂಚಿಕೊಂಡಿದ್ದರು. ನಂತರ ಇಂದು ಮತ್ತೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ಭದ್ರಕೋಟೆ ಛಿದ್ರ ಮಾಡಲು ‘ಶಾ’ ಪ್ಲಾನ್: ಹೆಚ್.ಡಿ. ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಒಂದು ಕಡೆ, ಡಿ.ಕೆ ಶಿವಕುಮಾರ್ ಮತ್ತೊಂದು ಕಡೆ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿದ್ದು, ಹಳೆ ಮೈಸೂರು ಭಾಗದಲ್ಲಿನ ದಳಪತಿಗಳು ಮತ್ತು ಡಿಕೆ ಶಿವಕುಮಾರ್ ಅವರ ಭದ್ರಕೋಟೆಯನ್ನು ಛಿದ್ರ ಮಾಡಲು ಮುಂದಾಗಿರುವ ಅಮಿತ್ ಶಾ ಮಠಾಧೀಶರ ಮೊರೆ ಹೋಗುವ ಮೂಲಕ ಜಾಣ ನಡೆ ಅನುಸರಿಸಿದ್ದಾರೆ.
ಇದು ಆರಂಭಿಕ ಹಂತವಾಗಿದ್ದು, ನಾಥ ಪರಂಪರೆಯ ಯೋಗಿ ಆದಿತ್ಯನಾಥರನ್ನು ಕರೆತಂದು ಒಕ್ಕಲಿಗ ಮತಗಳನ್ನು ಸೆಳೆಯುವ ತಂತ್ರಗಾರಿಕೆಯೂ ಮುಂದುವರೆದ ಭಾಗದಲ್ಲಿ ಇದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದಕ್ಕೆ ಬ್ರೇಕ್ ಹಾಕಲು ಬಿಜೆಪಿ ಅಧಿಕಾರಕ್ಕೆ ತನ್ನಿ: ಅಮಿತ್ ಶಾ ಕರೆ