ಬೆಂಗಳೂರು: ವಿಶ್ವಕರ್ಮ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಕರ್ಮ ಸಮುದಾಯ ಹಾಗೂ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ನಮ್ಮ ಸಮುದಾಯದ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ವಕರ್ಮ ನಾಡೋಜ ಮತ್ತು ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಉಮೇಶ್ ಕುಮಾರ್ ಹೇಳಿದರು.
ಪ್ರೆಸ್ಕ್ಲಬ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗುವ ಯೋಜನೆ ಇದು. ಸಮುದಾಯದ ಬೆಂಬಲಕ್ಕೆ ಪ್ರಧಾನಿ ನಿಂತಿರುವುದು ಶ್ಲಾಘನೀಯ. ತಮ್ಮ ಬೆಂಬಲ ಇದೇ ರೀತಿ ಮುಂದುವರಿಯಲಿ ಎಂದರು.
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಅಮೃತ ಕಾಲದತ್ತ ಸಾಗುತ್ತಿರುವ ಸುಸಂದರ್ಭದಲ್ಲಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ವರದಾನವಾಗುವ ವಿಶ್ವಕರ್ಮ ಜಯಂತಿಯಂದು 'ಪಿಎಂ ವಿಶ್ವಕರ್ಮ' ಯೋಜನೆ ಜಾರಿಗೊಳಿಸುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಆವರಣದಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ ಮರುದಿನವೇ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡಿದೆ. ಮುಂದಿನ ಐದು ವರ್ಷಗಳ ಅವಧಿಗೆ (2023 ರಿಂದ 28) ಅನ್ವಯವಾಗುವಂತೆ 13,000 ಕೋಟಿ ರೂಪಾಯಿ ಹಣಕಾಸು ವೆಚ್ಚದ ಕೇಂದ್ರೀಯ ವಲಯದ ಹೊಸ 'ಪಿಎಂ ವಿಶ್ವಕರ್ಮ' ಯೋಜನೆ ಜಾರಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
ದೇಶ ಸ್ವಾತಂತ್ರ್ಯ ಪಡೆದ ನಂತರ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಘೋಷಿಸಿದ ಅತಿ ದೊಡ್ಡ ಯೋಜನೆ ಇದಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿಷ್ಠಾನ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ. ವಿಶ್ವಕರ್ಮ ಸಮುದಾಯ ಆಭರಣ ತಯಾರಿಕೆ ಮತ್ತಿತರ ಕುಲಕಸುಬಿನಲ್ಲಿ ತೊಡಗಿಕೊಂಡಿದೆ. ಯಂತ್ರೋಪಕರಣಗಳ ಮೂಲಕ ಆಭರಣ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಾಂಪ್ರದಾಯಿಕ ವೃತ್ತಿ ಆತಂಕಕ್ಕೆ ಸಿಲುಕಿದ್ದು, ಈ ಯೋಜನೆಯಿಂದ ಮತ್ತೆ ಕುಲಕಸುಬು ಗತವೈಭವಕ್ಕೆ ಮರಳುವ ವಿಶ್ವಾಸವಿದೆ ಎಂದು ವಿವರಿಸಿದರು.
ಗುರುಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳು ಕೈಗಳು ಮತ್ತು ಸಾಧನ ಸಲಕರಣೆಗಳಿಂದ ಕೆಲಸ ಮಾಡುವುದನ್ನು ಪ್ರೋತ್ಸಾಹಿಸಿ ಬಲಪಡಿಸಲು ಈ ಯೋಜನೆ ಸಹಕಾರಿಯಾಗಲಿದೆ. ನುರಿತ ಕುಶಲಕರ್ಮಿಗಳಿಗೆ ವಿಶ್ವಮಾನ್ಯತೆ ದೊರಕಿಸಿಕೊಡಲು ಸಹಕಾರಿಯಾಗಲಿದೆ. ಯೋಜನೆ ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡುತ್ತಿರುವುದು ಸಹ ಉತ್ತಮ ಬೆಳವಣಿಗೆ ಎಂದರು.
ಯೋಜನೆಯಡಿ ಕೌಶಲ್ಯವರ್ಧನೆ, ಉಪಕರಣ ಸಾಧನಗಳ ಕಿಟ್ ಪಡೆಯಲು ಸಹಾಯಧನ, ಡಿಜಿಟಲ್ ವಹಿವಾಟಿಗೆ ಸಹಾಯಧನ ಮತ್ತು ಮಾರುಕಟ್ಟೆ ಬೆಂಬಲ ದೊರೆಯಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ 18 ಸಾಂಪ್ರದಾಯಿಕ ಕುಲಕಸುಬುಗಳು ಒಳಗೊಳ್ಳುತ್ತಿವೆ. ತರಬೇತಿ ಪಡೆಯುವವರಿಗೆ ಪ್ರತಿನಿತ್ಯ 500 ರೂ ಶಿಷ್ಯವೇತನ, ಒಂದು ವರ್ಷದಲ್ಲಿ ಐದು ಲಕ್ಷ ಕುಟುಂಬಗಳಿಗೆ ತರಬೇತಿ. ಐದು ವರ್ಷಗಳ ಅವಧಿಯಲ್ಲಿ ಒಟ್ಟು ಮೂವತ್ತು ಲಕ್ಷ ಕುಟುಂಬಗಳಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ವಿಶ್ವ ಕರ್ಮ ಸಮುದಾಯದ ಔದ್ಯೋಗಿಕ ಮತ್ತು ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಪೂರಕವಾಗಲಿದೆ ಎಂದು ಡಾ.ಎಂ.ಬಿ.ಉಮೇಶ್ ಕುಮಾರ್ ಹೇಳಿದರು.
ಇದನ್ನೂ ಓದಿ:ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ಬಿಡುಗಡೆಗೆ ತಡೆಯೊಡ್ಡಿ ಹೊರಡಿಸಿದ್ದ ಆದೇಶ ಹಿಂಪಡೆದ ಸರ್ಕಾರ