ಬೆಂಗಳೂರು : ಅಯೋಧ್ಯೆ ಶ್ರೀರಾಮಜನ್ಮಭೂಮಿ ಹೋರಾಟ, ದತ್ತಪೀಠ ಹೋರಾಟದಲ್ಲಿ ಭಾಗಿಯಾಗಿದ್ದ ವಿಶ್ವ ಹಿಂದೂ ಪರಿಷತ್ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ (63 ವರ್ಷ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
1960ರ ಮಾರ್ಚ್ 15 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಣ್ಣಿಮನೆಯಲ್ಲಿ ಜನಿಸಿದ ಕೇಶವ ಹೆಗಡೆಯವರು ತಮ್ಮ ಬಿಎ ಪದವಿ ವ್ಯಾಸಂಗದ ನಂತರ 1982ರಿಂದ ವಿಶ್ವ ಹಿಂದೂ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸಾಮಾಜಿಕ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಶ್ರೀ ಕೇಶವ ಹೆಗಡೆ ಅವರು ಮಹತ್ತರವಾದ ಕೊಡುಗೆ ನೀಡಿದವರು.
ಅಯೋಧ್ಯೆ ರಾಮಮಂದಿರ ಹೋರಾಟ, ದತ್ತಪೀಠ ಹೋರಾಟ, ಲವ್ ಜಿಹಾದ್ ವಿರುದ್ಧದ ಹೋರಾಟ, ಹಿಂದೂ ದೇವಾಲಯಗಳ ರಕ್ಷಣೆ ಮುಂತಾದ ಹಿಂದೂ ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷತ್ ನ ಪ್ರೊ.ಎಂ.ಬಿ ಪುರಾಣಿಕ್ ಸೇರಿದಂತೆ ಅನೇಕ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ನಾಳೆ ಗುರುವಾರ ಬೆಳಗ್ಗೆ 11.00 ಗಂಟೆಗೆ ಮೃತರ ಹುಟ್ಟೂರು ಶಿರಸಿ ನಗರದ ನೆಮ್ಮದಿ ಕೇಂದ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಸಾರ್ವಜನಿಕ ಶ್ರದ್ಧಾಂಜಲಿ ಸಭೆ: ಜುಲೈ 10ರಂದು ಸಂಜೆ 6.00ಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪಾ ಸಭಾಂಗಣದಲ್ಲಿ ನಡೆಯಲಿದೆ.