ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಇವರ ಪುತ್ರ ಪ್ರಶಾಂತ್ ಮಾಡಾಳ್ ಬಂಧನದ ಬಳಿಕ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.
ಸಿಎಂ ಸೂಚನೆ ಮೇರೆಗೆ ವಿರೂಪಾಕ್ಷಪ್ಪ ರಾಜೀನಾಮೆ ಸಲ್ಲಿಸಿದ್ದು, ಆಪ್ತರ ಮೂಲಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. "ನಿನ್ನೆ ನಡೆದ ದಾಳಿಗೂ ನನಗೂ ಸಂಬಂಧವಿಲ್ಲ. ಇದು ನನ್ನ ಕುಟುಂಬದ ವಿರುದ್ಧ ಷಡ್ಯಂತ್ರವಾಗಿದೆ. ಆದರೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸಬೇಕು" ಎಂದು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಮನವಿ ಮಾಡಿದ್ದಾರೆ.
ನಿನ್ನೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ಪೂರೈಸುವ ಟೆಂಡರ್ ನೀಡಲು ಟೆಂಡರ್ ಆಕಾಂಕ್ಷಿಯೊಬ್ಬರಿಂದ 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿರೂಪಾಕ್ಷ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಕ್ರೆಸೆಂಟ್ ರಸ್ತೆಯ ತಮ್ಮ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ತನಿಖೆ ತೀವ್ರಗೊಳಿಸಿದ್ದ ಲೋಕಾ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಮನೆಯಲ್ಲಿ ದೊರೆತ 6 ಕೋಟಿ ರೂ ಹಣವನ್ನು ಜಪ್ತಿ ಮಾಡಿದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಲಂಚ ಪಡೆದ ಪ್ರಕರಣ ತನಿಖಾ ಹಂತದಲ್ಲಿದೆ. ಇದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ವಿಚಾರ ನನಗೆ ಮಾಧ್ಯಮಗಳ ಮೂಲಕ ತಿಳಿದಿದೆ. ಈ ಪ್ರಕರಣದಲ್ಲಿ ನಾಲ್ಕೈದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಅವರು ಯಾವ ಹಣ ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ತಿಳಿಯಲಿದೆ ಎಂದರು.
ಶಾಸಕ ವಿರೂಪಾಕ್ಷಪ್ಪ ತನಿಖೆ ಸಾಧ್ಯತೆ:ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬಂಧನ ಪ್ರಕರಣ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಲೋಕಾಯುಕ್ತ ಮರು ನಿರ್ಮಾಣವಾದ ಬಳಿಕ ನಡೆದ ಅತಿ ದೊಡ್ಡ ದಾಳಿ ಎನಿಸಿಕೊಂಡಿರುವ ಈ ಪ್ರಕರಣದಲ್ಲಿ ಆಡಳಿತಾರೂಢ ಪಕ್ಷದ ಶಾಸಕರ ಪುತ್ರನೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ನು ಶಾಸಕ ವಿರೂಪಾಕ್ಷಪ್ಪ ಅವರನ್ನು ಕೂಡ ಲೋಕಾಯುಕ್ತ ತನಿಖೆಗೊಳಪಡಿಸುವ ಸಾಧ್ಯತೆಯಿದೆ.
ಮಾಡಾಳ್ ವಿರೂಪಾಕ್ಷ ನಿಗಮದ ಅಧ್ಯಕ್ಷರಾಗಿದ್ದ ನಿಗಮಕ್ಕೆ ಸಂಬಂಧಿಸಿದ ಕಚ್ಚಾವಸ್ತು ಪೂರೈಕೆ ಟೆಂಡರ್ ವಿಚಾರವಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಮುಂಗಡ ಹಣ ಸ್ವೀಕರಿಸುವಾಗ ವಿರೂಪಾಕ್ಷಪ್ಪ ಪುತ್ರನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಇದೇ ಕಾರಣದಿಂದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ತನಿಖೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಪ್ರಶಾಂತ್ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂಪಾಯಿ ಹಣ ಪತ್ತೆ!