ಬೆಂಗಳೂರು:ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಜನರಿಗೆ ತಲುಪಿಸಲು ಆರಂಭಿಸಿದ್ದ ಕರ್ನಾಟಕ ಜನ ಸಂವಾದ ವರ್ಚುಯಲ್ ರ‍್ಯಾಲಿಯ ಸಮಾರೋಪ ಸಮಾರಂಭವನ್ನು ಜುಲೈ 4ರಂದು ಆಯೋಜಿಸಲಾಗಿದೆ.
ಜುಲೈ 4ರಂದು ಕರ್ನಾಟಕ ಜನ ಸಂವಾದ ರ‍್ಯಾಲಿಯ ಸಮಾರೋಪ ಸಮಾರಂಭ - ಕರ್ನಾಟಕ ಜನ ಸಂವಾದ ಸಮಾರೋಪ
ಕರ್ನಾಟಕ ಜನ ಸಂವಾದ ವರ್ಚುಯಲ್ ರ‍್ಯಾಲಿಯ ಸಮಾರೋಪ ಸಮಾರಂಭವನ್ನು ಜುಲೈ 4ರಂದು ಆಯೋಜನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಜನರಿಗೆ ತಲುಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೂನ್ 14ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನವದೆಹಲಿಯಿಂದ ಕರ್ನಾಟಕ ಜನ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವೀಡಿಯೋ ಸಂವಾದದ ಮೂಲಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದರು. ಅಂದು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿ ಭಾಷಣ ಮಾಡಿದ್ದರು. ಇದೀಗ ಎಲ್ಲಾ ಜಿಲ್ಲಾ ಘಟಕಗಳ ವರ್ಚುಯಲ್ ರ‍್ಯಾಲಿ ಮುಗಿದಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಂದು ಸಂಜೆ 5 ಗಂಟೆಗೆ ಕರ್ನಾಟಕ ಜನ ಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ದೆಹಲಿಯಿಂದ ವರ್ಚುವಲ್ ಭಾಷಣ ಮಾಡಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ರ‍್ಯಾಲಿಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.