ಬೆಂಗಳೂರು:ಕಾರು ಚಾಲಕರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆೆ ಹೋದಾಗ, ಆಕ್ರೋಶಗೊಂಡ ಒಬ್ಬ ಚಾಲಕ ಮತ್ತೊಬ್ಬ ಚಾಲಕನ ಮೇಲೆ ಕಾರು ಹರಿಸುವ ರೀತಿಯಲ್ಲಿ ತಳ್ಳಿಕೊಂಡು ಹೋಗಿರುವ ಘಟನೆ ಹೆಬ್ಬಾಳ ಮೇಲು ಸೇತುವೆ ಮೇಲೆ ನಡೆದಿದೆ. ಘಟನೆ ನ.29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರದೀಪ್ ಹೆರ್ಲೆ ಎಂಬವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, ತಪ್ಪಿತಸ್ಥ ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ. ಘಟನೆ ವೇಳೆ 2 ಕಾರಿನಲ್ಲಿ ಪ್ರಯಾಣಿಕರು ಇದ್ದರು ಎಂಬುದನ್ನು ಪ್ರದೀಪ್ ಹೆರ್ಲೆ ಉಲ್ಲೇಖಿಸಿದ್ದಾರೆ. ಅದಕ್ಕೆೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸರು, ಸಮೀಪದ ಸಂಚಾರ ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆೆಲೆಯಲ್ಲಿ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಕೃತ್ಯ ಎಸಗಿದ ಕಾರು ಚಾಲಕನನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ.29ರಂದು ಬೆಳಗ್ಗೆೆ 8 ಗಂಟೆಯಿಂದ 9ಗಂಟೆ ನಡುವೆ ಹೆಬ್ಬಾಳ ಮೇಲು ಸೇತುವೆಯಲ್ಲಿ ಇನೋವಾ ಮತ್ತು ಇಟಿಯಾಸ್ ಕಾರು ಚಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆೆ ಜಗಳ ನಡೆದಿದೆ. ಇಟಿಯಾಸ್ ಕಾರು ಚಾಲಕ, ಮತ್ತೊಬ್ಬ ಚಾಲಕನ ಇನೋವಾ ಕಾರಿನ ಬಾನೆಟ್‌ಗೆ ಒರಗಿ ಜಗಳ ಮಾಡಿದ್ದಾನೆ. ಇದೇ ವೇಳೆ ಆಕ್ರೋಶಗೊಂಡ ಇನೋವಾ ಕಾರು ಚಾಲಕ, ಇಟಿಯಾಸ್ ಕಾರು ಚಾಲಕನನ್ನು ತಳ್ಳಿಕೊಂಡೇ ಸುಮಾರು 100 ಮೀಟರ್ ದೂರ ಹೋಗಿದ್ದಾನೆ.