ಬೆಂಗಳೂರಲ್ಲಿ ಬಿಲ್ಡಿಂಗ್ಗಳ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಕಟ್ಟಡ ವಿನ್ಯಾಸಕ ನರೇಶ್
ಬೆಂಗಳೂರಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಬಿಬಿಎಂಪಿಯ ನಿದ್ದೆಗೆಡಿಸಿವೆ. ಸಾಲು ಸಾಲು ಕಟ್ಟಡ ನೆಲಕ್ಕುರುಳಿದ ಕೇಸ್ಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕಠಿಣ ನಿಮಯದ ಜಾರಿಗೂ ಮುಂದಾಗಿದ್ದಾರೆ. ಕಟ್ಟಡ ಕುಸಿತಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಕಟ್ಟಡ ವಿನ್ಯಾಸಕ ನರೇಶ್ ವಿವರಿಸಿದ್ದಾರೆ.
ಬೆಂಗಳೂರಲ್ಲಿ ಬಿಲ್ಡಿಂಗ್ಗಳ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಕಟ್ಟಡ ವಿನ್ಯಾಸಕ ನರೇಶ್
By
Published : Oct 9, 2021, 9:03 AM IST
|
Updated : Oct 9, 2021, 11:50 AM IST
ಬೆಂಗಳೂರು: ನಗರದಲ್ಲಿ ಸರಣಿ ಕಟ್ಟಡ ಕುಸಿತ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಲಕ್ಕಸಂದ್ರ, ಡೈರಿ ಸರ್ಕಲ್, ಹಾಗೂ ಕಸ್ತೂರಿ ನಗರದಲ್ಲಿನ ಕಟ್ಟಡಗಳು ಕುಸಿದು ಬಿದ್ದಿವೆ. ಬಿಬಿಎಂಪಿಯ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವುದೇ ದುರ್ಘಟನೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಟ್ಟಡ ನಿರ್ಮಾಣಕ್ಕೂ ಮೊದಲು ಹಾಗೂ ಕಟ್ಟಡ ನಿರ್ಮಾಣದ ನಂತರ ಹಲವು ನಿಯಮಗಳನ್ನು ಮಾಲೀಕರು ಪಾಲಿಸಬೇಕಾಗುತ್ತದೆ. ಇದರ ಪರಿಶೀಲನೆಯನ್ನು ಬಿಬಿಎಂಪಿಯಾಗಲೀ, ಬಿಡಿಎಯಾಗಲೀ ಮಾಡಬೇಕಾಗುತ್ತದೆ. ಆದರೆ ಇಬ್ಬರಿಂದಲೂ ನಿಯಮಗಳ ಉಲ್ಲಂಘನೆಯಾದಾಗ ಕಟ್ಟಡ ನೆಲಕ್ಕುರುಳುವಂತಹ ಘೋರ ಘಟನೆಗಳು ನಡೆಯುತ್ತವೆ. ನಗರದಲ್ಲಿ ಕಳೆದ 15 ವರ್ಷಗಳಿಂದ ಈ ನಿಯಮ ಉಲ್ಲಂಘಿಸಿರುವ ಕಟ್ಟಡಗಳು ತಲೆಯೆತ್ತಿವೆ ಎಂದು ಕಟ್ಟಡ ಕಟ್ಟಡ ವಿನ್ಯಾಸಕ ನರೇಶ್ ವಿ.ಎನ್ ಆರೋಪಿಸಿದ್ದಾರೆ.
ನಗರದಲ್ಲಿ ಈ ರೀತಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಮೂರ್ನಾಲ್ಕು ಕಟ್ಟಡಗಳನ್ನು ಬಿಬಿಎಂಪಿ ನೆಲಸಮ ಮಾಡಿದರೆ, ಇತರರಿಗೂ ನಿಯಮಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಸಂದೇಶ ರವಾನಿಸಿದಂತಾಗುತ್ತದೆ ಎಂದಿದ್ದಾರೆ.
ಯಾವುದೇ ಕಟ್ಟಡ ನಿರ್ಮಾಣದ ಮೊದಲು ನಕ್ಷೆ ಮಂಜೂರಾತಿ, ಕಮೆನ್ಸ್ಮೆಂಟ್ ಸರ್ಟಿಫಿಕೇಟ್ ನಂತರ ಕಟ್ಟಡ ನಿಯಮ ಪ್ರಕಾರವಾಗಿ ಸೆಟ್ ಬ್ಯಾಕ್ ಜಾಗ ಬಿಟ್ಟು, ಅಡಿಪಾಯಕ್ಕೆ ಅನುಗುಣವಾಗಿ ಎಷ್ಟು ಮಹಡಿಯ ಮನೆಕಟ್ಟಿಸಬಹುದು ಜೊತೆಗೆ ಇಂಜಿನಿಯರ್ ಸ್ಟೆಬಿಲಿಟಿ ಸರ್ಟಿಫಿಕೇಟ್ ಕೊಟ್ಟ ಬಳಿಕವಷ್ಟೇ ಬಿಬಿಎಂಪಿ ನಕ್ಷೆ ಮಂಜೂರಾತಿ ಕೊಡಬಹುದು.
ಆದರೆ ಈಗ ಬಿಬಿಎಂಪಿಯ ಸ್ವಾಧೀನಾನುಭವ ಪತ್ರ (ಆಕ್ಯುಪೇಷನ್ ಪ್ರಮಾಣಪತ್ರ oc) ಇಲ್ಲದೆಯೇ ಜಲಮಂಡಳಿ, ಬೆಸ್ಕಾಂ ನೀರು ಹಾಗೂ ವಿದ್ಯುತ್ ಸಂಪರ್ಕ ಕೊಡುತ್ತಿದ್ದಾರೆ. ಚಿಕ್ಕಚಿಕ್ಕ ಮನೆಗಳು, ಕಟ್ಟಡಗಳ ನಿರ್ಮಾಣ ಮಾಡುವಾಗ ನಿಯಮಗಳ ಪಾಲನೆಯಾಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಪರಿಶೀಲನೆಗೆ ಬಂದರೂ ಲಂಚ ತೆಗೆದುಕೊಂಡು ಹೋಗುತ್ತಾರೆ ಎಂದು ಆರೋಪಿಸಿದರು.
ನಗರದಲ್ಲಿ ಒಂದರ ಹಿಂದೆ ಮತ್ತೊಂದು ಕಟ್ಟಡ ಕುಸಿತ
ನಗರದ ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದಲ್ಲಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿತ್ತು, ಅದೃಷ್ಟವಶಾತ್ ಮನೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿ ಬಂದು ಬಚಾವ್ ಆಗಿದ್ದರು. ಬಳಿಕ ಈ ಪ್ರಕರಣ ಸಂಬಂಧ ಬಿಲ್ಡಿಂಗ್ ಮಾಲೀಕ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸುಮಾರು 70 ವರ್ಷದ ಕಟ್ಟಡ ಶಿಥಿಲವಾಗಿದ್ದರೂ ಮೆಟ್ರೋ ಕಾರ್ಮಿಕರಿಗೆ ಬಾಡಿಗೆಗೆ ನೀಡಿದ್ದರು. ಶಿಥಿಲವಾಗಿದ್ದ ಕಟ್ಟಡ ತೆರವು ಮಾಡದೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಆಡುಗೋಡಿ ಠಾಣೆಗೆ ಬಿಬಿಎಂಪಿ ಅಧಿಕಾರಿಗಳು ದೂರು ನೀಡಲಾಗಿತ್ತು.
ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದ 3 ಅಂತಸ್ತಿನ ಕಟ್ಟಡ
ಈ ಪ್ರಕರಣ ನಡೆದ ಬಳಿಕ ನಗರದ ಸೆ.29ರಂದು ಡೈರಿ ಸರ್ಕಲ್ನಲ್ಲಿನ ಬಮೂಲ್ ಉದ್ಯೋಗಿಗಳ ಕುಟುಂಬದವರ ವಾಸಕ್ಕಾಗಿ 35 ರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕ್ವಾಟರ್ಸ್ ಕುಸಿದಿತ್ತು. ಮೂರು ಅಂತಸ್ತಿನ ಕಟ್ಟಡ ಭಾಗಶಃ ಕುಸಿದ ಪರಿಣಾಮ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.
ಬೆಂಗಳೂರು ಮಿಲ್ಕ್ ಫೆಡರೇಷನ್ ಆವರಣದಲ್ಲಿರುವ ಕ್ವಾಟರ್ಸ್
ಇದಾದ ಬಳಿಕ ನಗರದ ಕಸ್ತೂರಿ ನಗರದಲ್ಲಿನ ಡಾಕ್ಟರ್ಸ್ ಲೇಔಟ್ನಲ್ಲಿ 5 ಅಂತಸ್ತಿನ ಕಟ್ಟಡವೊಂದು ಧರೆಗುರುಳಿತ್ತು. ಕಟ್ಟಡ ವಾಲಿದ್ದರಿಂದ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಕಟ್ಟಡವು 2014 ರಲ್ಲಿ ನಿರ್ಮಾಣವಾಗಿದ್ದು, ಆಯೇಶಾ ಬೇಗ್ ಎಂಬುವರಿಗೆ ಸೇರಿದ್ದಾಗಿದೆ. ಘಟನೆ ಬಳಿಕ ಮಾಲೀಕನನ್ನು ಬಂಧಿಸಲಾಗಿತ್ತು.
ಕಸ್ತೂರಿ ನಗರದಲ್ಲಿನ ಡಾಕ್ಟರ್ಸ್ ಲೇಔಟ್ ಕಟ್ಟಡ
ಬಿಬಿಎಂಪಿ ಸರ್ವೇ ಹೇಳುವುದೇನು?
ಬೆಂಗಳೂರಲ್ಲಿ ಇನ್ನೂ 194 ಕಟ್ಟಡಗಳು ಕುಸಿಯುವ ಹಂತದಲ್ಲಿವೆ ಎಂದು ಬಿಬಿಎಂಪಿ ಸರ್ವೇ ನಡೆಸಿತ್ತು. 2019 ನವೆಂಬರ್ನಲ್ಲೇ ಸರ್ವೇ ಕಾರ್ಯ ಮಾಡಲಾಗಿತ್ತು. ಈ ಪೈಕಿ 78 ಕಟ್ಟಡಗಳ ಮಾಲೀಕರಿಗೆ ಮಾತ್ರ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ಬಳಿಕ ಮಾಲೀಕರೇ ದುರಸ್ತಿ ಮಾಡಬೇಕು ಅಥವಾ ಪಾಲಿಕೆಯೇ ತೆರವು ಮಾಡಬೇಕು. ಆದರೆ ಬಿಬಿಎಂಪಿ ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗ್ತಿದೆ. ಕಟ್ಟಡ ಕುಸಿದ ಬಳಿಕವಷ್ಟೇ ಮಾಲೀಕರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ವಲಯ
ಶಿಥಿಲವಾದ ಕಟ್ಟಡಗಳ ಸಂಖ್ಯೆ
ನೋಟಿಸ್ ನೀಡಿದ ಸಂಖ್ಯೆ
ಯಲಹಂಕ
67
08
ಬೆಂ.ಪೂರ್ವ
53
33
ಬೆಂ.ಪಶ್ಚಿಮ
33
06
ಬೆಂ.ದಕ್ಷಿಣ
38
30
ಮಹದೇವಪುರ
03
00
ಒಟ್ಟು
194
77
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, ಬಿಬಿಎಂಪಿ ಕಟ್ಟಡ ನಿರ್ಮಾಣದ ನಿಯಮಗಳನ್ನು ಗಾಳಿಗೆ ತೂರಿ, ಪಾಲಿಕೆ ನೀಡಿದ ಅನುಮತಿಗಿಂತ ಹೆಚ್ಚಿನ ಮಹಡಿಗಳ ನಿರ್ಮಾಣ ಮಾಡಿದರೆ ತೆರವು ಮಾಡಲು ಚಿಂತನೆ ನಡೆಸಿದೆ. ಬಿಬಿಎಂಪಿ ಬಿಲ್ಡಿಂಗ್ ಕನ್ಸ್ಸ್ಟ್ರಕ್ಷನ್ ಬೈಲಾ ನಿಯಮ ಉಲ್ಲಂಘನೆ ಮಾಡಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕೆಂದು, ಎಲ್ಲಾ ವಲಯಗಳ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದೇನೆ ಎಂದರು.