ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಬೆಂಗಳೂರಿಗೆ ವಿಧಿಸಲಾಗಿದ್ದ ಲಾಕ್ಡೌನ್ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ನಗರ ಪೊಲೀಸರು ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಾದ್ಯಂತ ಕಳೆದ 2 ತಿಂಗಳಿನಿಂದಲೂ ಕೋವಿಡ್ ಭಯ, ಲಾಕ್ ಡೌನ್, ಎಲ್ಲಿ ನೋಡಿದ್ರೂ ಬ್ಯಾರಿಕೇಡ್ ಇದೆಲ್ಲದರ ನಡುವೆಯೂ ಡೋಂಟ್ ಕೇರ್ ಎಂಬಂತೆ ರಸ್ತೆಗಿಳಿದವರೇ ಹೆಚ್ಚು.
ಅಂಥವರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದ ಬೆಂಗಳೂರು ಪೊಲೀಸರು ಸಾಲು ಸಾಲು ಪ್ರಕರಣಗಳನ್ನ ದಾಖಲಿಸುವ ಮೂಲಕ ನಿರ್ಲಕ್ಷ್ಯ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾ 2.0 ಅವಧಿಯೊಂದರಲ್ಲೇ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡದೇ ಇರುವ ಆರೋಪದಡಿ ಬರೋಬ್ಬರಿ 1,86,549 ಪ್ರಕರಣ ದಾಖಲಿಸಿ, ಒಟ್ಟು 4.54 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.