ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದ ಆರೋಪ ಕಾಂಗ್ರೆಸ್, ಎಸ್ಡಿಪಿಐ, ಬಿಎಸ್ಪಿ ಹಾಗೂ ಎಎಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಕೇಳಿ ಬಂದಿದೆ. ಏಪ್ರಿಲ್ 28ರ ಶುಕ್ರವಾರದ ನಮಾಜ್ ವೇಳೆ ಡಿಜೆ ಹಳ್ಳಿಯ ಮಸೀದಿ ಬಳಿ ಎಸ್ಡಿಪಿಐ, ಕಾಂಗ್ರೆಸ್ ಹಾಗೂ ಬಿಎಸ್ಪಿ ಕಾರ್ಯಕರ್ತರು ಪ್ರಚಾರ ಮಾಡಿದರೆ, ಟಿಪ್ಪು ಸರ್ಕಲ್ ಬಳಿಯ ಮೆಕ್ಕಾ ಮಸೀದಿ ಬಳಿ ಕಾಂಗ್ರೆಸ್, ಬಿಎಸ್ಪಿ ಕಾರ್ಯಕರ್ತರು ಮತ್ತು ಹುಸೇನಿಯಾ ಮಸೀದಿ ಬಳಿ ಎಎಪಿ, ಎಸ್ಡಿಪಿಐ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಪ್ರಚಾರ ಮಾಡಿದ್ದಾರೆ. ಮಸೀದಿ ಒಳಗೆ ಹೋಗುವವರಿಗೆ, ಹೊರಗೆ ಬರುವವರಿಗೆ ತಮ್ಮ ಪಕ್ಷದ ಪರ ಮತಯಾಚನೆ ಮಾಡುತ್ತಿರುವ ದೃಶ್ಯಗಳು ಲಭ್ಯವಾಗಿದ್ದು, ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘಿಸಿರುವುದಲ್ಲದೇ ಕೋಮು ಪ್ರಚೋದನೆ, ಕೋಮು ಸೌಹಾರ್ದತೆಗೆ ಧಕ್ಕೆಯುಂಟುಮಾಡುವ ಸಂದೇಶ ಪ್ರಕಟಿಸಿದ್ದ ಫೇಸ್‌ಬುಕ್ ಪೇಜ್ ಅಡ್ಮಿನ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ಕರ್ನಾಟಕ ಮತ್ತೊಂದು ವೆಸ್ಟ್ ಬೆಂಗಾಲ್, ಪಂಜಾಬ್, ಕೇರಳದಂತಾದಗದಿರಲಿ. ಹಿಂದೂಗಳು ತಮ್ಮ ಹಕ್ಕುಗಳನ್ನ ರಕ್ಷಿಸಿಕೊಳ್ಳಲು ಬಿಜೆಪಿಗೆ ಮತ ಹಾಕಿ. ಪಂಜಾಬ್, ಕೇರಳದಲ್ಲಿ ಏನಾಗಿದೆ ಎಂದು ನಿಮಗೆ ಗೊತ್ತೇ ಇದೆ ಎಂದು ಪೋಸ್ಟ್ ಪ್ರಕಟಿಸಿದ್ದ PYJM - Padmanabhanagara Constituency ಹೆಸರಿನ ಫೇಸ್‌ಬುಕ್ ಪೇಜ್ ಅಡ್ಮಿನ್ ವಿರುದ್ಧ ಎಲೆಕ್ಷನ್ ಎಫ್ಎಸ್ ಟಿ ಟೀಂ ಲೀಡರ್ ದಯಾನಂದ್ ಎಂಬುವವರು ನೀಡಿದ ದೂರಿನನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.