ಬೆಂಗಳೂರು : ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಸಾರ್ವಜನಿಕರು ದೂರು ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಆವರಣದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಚುನಾವಣಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಭ್ರಷ್ಟ ಆಚರಣೆಗಳಿಗೆ, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ, ಇತರೆ ಚುನಾವಣಾ ಅಪರಾಧಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ.
ಸಾರ್ವಜನಿಕರು ದೂರು ನೀಡಲು ಬಿಬಿಎಂಪಿಯು ಕೇಂದ್ರ ಕಛೇರಿಯ ಆವರಣದಲ್ಲಿನ ಅನೆಕ್ಸ್-3 ಕಟ್ಟಡ, 6ನೇ ಮಹಡಿಯಲ್ಲಿ ಜಿಲ್ಲಾ ದೂರು ಮೇಲ್ವಿಚಾರಣೆ ಕೋಶವನ್ನು ದಿನದ 24 ಗಂಟೆ ಕಾರ್ಯಾಚರಣೆಯಲ್ಲಿ ಇರುವಂತೆ ಸ್ಥಾಪಿಸಲಾಗಿದ್ದು, ದೂರು ಪರಿಹಾರ ಮತ್ತು ಮತದಾರರ ಸಹಾಯವಾಣಿ ನೋಡಲ್ ಅಧಿಕಾರಿ ಪ್ರತೀಕ್ ಬಾಯಲ್ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ. ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1950, ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ಹಾಗೂ ಸಿವಿಜಿಲ್ ಆಪ್ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸಹಾಯವಾಣಿ :ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. 172 ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕಂದಾಯಾಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಕಂಟ್ರೋಲ್ ರೂಂ ನ್ನು ಸ್ಥಾಪಿಸಲಾಗಿದೆ. ಈ ಕಂಟ್ರೋಲ್ ದಿನದ 24 ಗಂಟೆಯೂ ಸೇವೆಯಲ್ಲಿದ್ದು, ಇದರ ದೂರವಾಣಿ ಸಂಖ್ಯೆ: 080-25525952 ಆಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ಮೇಲ್ಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದಾಖಲಿಸಬಹುದಾಗಿರುತ್ತದೆ ಎಂದು ಚುನಾವಣಾಧಿಕಾರಿಯಾದ ಇಸ್ಲಾವುದ್ದೀನ್ ಜೆ. ಗದ್ಯಾಳ್ ಅವರು ಹೇಳಿದ್ದಾರೆ.