ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸೇರ್ಪಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮತ್ತು ಬಿಬಿಎಂಪಿ ಆಯುಕ್ತರಿಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್ ಮತ್ತೊಮ್ಮೆ ಆಯುಕ್ತರಿಗೆ, ಆಡಳಿತಗಾರರಿಗೆ ಪತ್ರ ಬರೆದಿದ್ದಾರೆ.
ಜನವರಿ 3 ರಂದು ರಾಜಧಾನಿಯ ಸುಮಾರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಹೊರ ರಾಜ್ಯಗಳ 1,50,000 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಜನರನ್ನು ಸೇರಿಸಿರುವ ಸಂಬಂಧ ಮತ್ತು ಕಳೆದ ವರ್ಷದ ಡಿಸೆಂಬರ್ 15 ರಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 4,700 ಕ್ಕೂ ಹೆಚ್ಚು ಹೊರ ರಾಜ್ಯಗಳ ಅಲ್ಪ ಸಂಖ್ಯಾತ ಮತದಾರರನ್ನು ಚಿಕ್ಕಪೇಟೆ ವಿಭಾಗದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ವಿಷಯವನ್ನೂ ಸಹ ದಾಖಲೆಗಳ ಸಹಿತ ಪಾಲಿಕೆಯ ಆಯುಕ್ತ, ವಿಶೇಷ ಆಯುಕ್ತ (ಕಂದಾಯ) ಮತ್ತು ಜಂಟಿ ಆಯುಕ್ತ (ಕಂದಾಯ) ಇವರ ಗಮನಕ್ಕೆ ತರಲಾಗಿತ್ತಲ್ಲದೇ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೂಡ ಕೋರಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂದುವರೆದು, ಮಾರ್ಚ್ 19 ರಂದು ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 170 ರಲ್ಲಿ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರು ಕಾನೂನು ಬಾಹಿರವಾಗಿ ವೀರನ್ ಏಳುಮಲೈ ಎಂಬ ಸಹಾಯಕನೊಬ್ಬನನ್ನು ನಿಯೋಜಿಸಿಕೊಂಡು ವೀರನ್ ಏಳುಮಲೈ ಎಂಬುವವನ ಮುಖಾಂತರ ನೂರಾರು ಜನ ಹೊರ ಪ್ರದೇಶಗಳ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿದ್ದ ವಿಷಯವನ್ನೂ ಸಹ ದಾಖಲೆಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಸಹ ನೀಡಲಾಗಿತ್ತು ಎಂದಿದ್ದಾರೆ.