ಬೆಂಗಳೂರು:ಟೀಂ ಇಂಡಿಯಾ ಕ್ರಿಕೆಟ್ನ ಬೌಲರ್ವಿನಯ್ ಕುಮಾರ್ ಇನ್ಮುಂದೆ ಪಾಂಡಿಚೇರಿ ಕ್ರಿಕೆಟ್ ತಂಡದ ಪರ ಆಡಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ.
ಕ್ರಿಕೆಟಿಗ ವಿನಯ್ ಕುಮಾರ್ ಸುದ್ದಿಗೋಷ್ಠಿ ಕರೆದ ಬೆನ್ನೆಲ್ಲೇ ಅವರು ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದ ವಿನಯ್ ಕುಮಾರ್ ನಾನು ನಿವೃತ್ತಿ ಹೊಂದುತ್ತಿಲ್ಲ, ಬದಲಾಗಿ ಪಾಂಡಿಚೇರಿ ಕ್ರಿಕೆಟ್ ತಂಡಕ್ಕೆ ಮುಂಬರುವ ದಿನಗಳಲ್ಲಿ ಆಡುತ್ತೇನೆ ಎಂದಿದ್ದಾರೆ.
ಪಾಂಡಿಚೇರಿ ಕ್ರಿಕೆಟ್ ತಂಡಕ್ಕೆ ಆಡಲಿರುವ ವಿನಯ್ ಕುಮಾರ್ ಪಾಂಡಿಚೇರಿ ಕ್ರಿಕೆಟ್ ತಂಡದ ಕೋಚ್ ಜೆ ಅರುಣ್ ಕುಮಾರ್ ತಂಡಕ್ಕೆ ಆಡಲು ಆಫರ್ ನೀಡಿದ್ದಾರೆ. ಇದರ ಜೊತೆಗೆ ಯುವಕರಿಗೆ ರಾಜ್ಯ ತಂಡದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕ ರಣಜಿ ತಂಡದಲ್ಲಿ ಆಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಆಡುತ್ತಿದ್ದೇನೆ ಹಾಗೂ ಕಳೆದ ವರ್ಷ ಕರ್ನಾಟಕ ರಣಜಿ ತಂಡದಲ್ಲಿ ಆಡಿದ್ದು ಖುಷಿ ನೀಡಿದೆ ಎಂದು ವಿನಯ್ ಕುಮಾರ್ ತಿಳಿಸಿದರು. ಈಗಾಗಲೇ ಟೀಂ ಇಂಡಿಯಾ ಪರ ಹಲವು ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಿರುವ ವಿನಯ್ ಕುಮಾರ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಇದರ ಜತೆಗೆ ಅನೇಕ ವರ್ಷಗಳ ಕಾಲ ಕರ್ನಾಟಕ ತಂಡವನ್ನ ಪ್ರತಿನಿಧಿಸಿರುವ ಅವರು, ಅನೇಕ ಸರಣಿಗಳಲ್ಲಿ ಕರ್ನಾಟಕ ತಂಡವನ್ನ ಮುನ್ನಡೆಸಿದ್ದಾರೆ.