ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಗೆ ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿದ ಪರಿಣಾಮ ಮಹದೇವಪುರ ಕ್ಷೇತ್ರದ ಶೀಗೆಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರೀನ್ ಪೋರ್ಡ್ ಪೇಸ್ 1 ಐಶಾರಾಮಿ ವಿಲ್ಲಾಗಳು ಸಂಪೂರ್ಣ ಜಲಾವೃತವಾಗಿದೆ.
ಕಳೆದ 20 ವರ್ಷಗಳ ಹಿಂದೆ ನಿರ್ಮಾಣವಾದ ಗ್ರೀನ್ ಪೋರ್ಡ್ ಪೇಸ್ 1 ಬಡಾವಣೆಯಲ್ಲಿ ಒಟ್ಟು 50 ಮನೆಗಳಿದ್ದು,ಇದರಲ್ಲಿ 26 ಮನೆಗಳಲ್ಲಿ ಜನರು ವಾಸವಾಗಿದ್ದರು. ಆದರೆ, ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಗೆ ಬೆಂಗಳೂರಿನಿಂದ ಇಲ್ಲಿಗೆ ಸಂಪರ್ಕ ಕಲ್ಪಿಸುವ ಕಾಡುಗೋಡಿ ರಾಜಕಾಲುವೆ ತುಂಬಿ ಹರಿದ ಪರಿಣಾಮ ಗ್ರೀನ್ ಪೋರ್ಡ್ ಪೇಸ್ 1 ಬಡಾವಣೆಗೆ ಹೊಂದಿಕೊಂಡಿರುವ ಕಾಂಪೌಂಡ್ ಕುಸಿದು ನೀರು ನುಗ್ಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಎನ್ ಡಿ ಆರ್ ಎಫ್ ತಂಡ ಮನೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದೆ.
ದಕ್ಷಿಣ ಪಿನಾಕಿನಿ ನದಿಯ ಅಬ್ಬರಕ್ಕೆ 50 ವಿಲ್ಲಾಗಳು ಮುಳುಗಡೆ ಬಡಾವಣೆಗೆ ನೀರು ನುಗ್ಗಿ ಅಪಾರ ಹಾನಿ : ಬಡಾವಣೆಗೆ ನೀರು ನುಗ್ಗಿರುವುರಿಂದ ಸಂಪೂರ್ಣವಾಗಿ ಕೆಳ ಅಂತಸ್ತಿನ ಮನೆಗಳು ಮುಳುಗಡೆಯಾಗಿವೆ. ಮನೆಯಲ್ಲಿದ್ದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ. ಜೊತೆಗೆ ಇಲ್ಲಿಗೆ ಆಗಮಿಸುತ್ತಿದ್ದ ಮನೆ ಹಾಗೂ ಗಾರ್ಡನ್ ಕೆಲಸಗಾರರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ : ಈ ಬಗ್ಗೆ ಗ್ರೀನ್ ಪೋರ್ಡ್ ಪೇಸ್ 1 ಬಡಾವಣೆಯ ಜನರಲ್ ಸೆಕ್ರೆಟರಿ ಮುಸ್ತಾಪ್ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಈ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ ಮಳೆಯಿಂದ ಸಮಸ್ಯೆ ಆಗಿದೆ. ಬಡಾವಣೆಯ ಹಿಂದೆ ದಕ್ಷಿಣ ಪಿನಾಕಿನಿ ನದಿಯ ಕಾಲುವೆ ಹಾದುಹೋಗುತ್ತದೆ. ನೀರು ತುಂಬಿ ಹರಿದ ಕಾರಣ ಕಾಂಪೌಂಡ್ ಕುಸಿದು, ನೀರೆಲ್ಲಾ ನಮ್ಮ ಬಡಾವಣೆಗೆ ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ ಸಾಕಷ್ಟು ಅನಾಹುತಗಳಾಗಿವೆ. ಇದಕ್ಕೆ ಸರ್ಕಾರ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ :ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆಯ ಮಳೆ.. ವಿಡಿಯೋ ನೋಡಿ!