ಬೆಂಗಳೂರು:ಚುನಾವಣೆಗಳು ಬಂದಾಗಲೆಲ್ಲಾ ಚುನಾವಣಾ ನೀತಿ ಸಂಹಿತೆ ಸದ್ದು ಮಾಡುತ್ತದೆ. ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳೇ ಈ ನೀತಿ ಸಂಹಿತೆ. ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 5,762 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22 ಮತ್ತು 27ರಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಡಿಸೆಂಬರ್ 31ರವರೆಗೂ ಈ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಚುನಾವಣೆ ನೀತಿ ಸಂಹಿತೆ ಎಂಬುದು ತುಂಬ ಕಟ್ಟುನಿಟ್ಟಾದ ವಿಚಾರ ಎಂಬುದು ಬಹುತೇಕರಿಗೆ ತಿಳಿದಿರುತ್ತದೆ. ಚುನಾವಣೆ ನೀತಿ ಸಂಹಿತೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದ್ದು, ರಾಜಕಾರಣಿಗಳು ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಒಂದಿಷ್ಟು ಮಾಹಿತಿ ಇಲ್ಲಿದೆ.
ಹೊಸ ಯೋಜನೆ, ವಿನಾಯಿತಿ ಘೋಷಣೆ ಮಾಡುವಂತಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಸರ್ಕಾರದಿಂದ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಅಥವಾ ಅನುಷ್ಠಾನ ಮಾಡುವಂತಿಲ್ಲ. ಉದ್ಘಾಟನೆ, ಅಡಿಗಲ್ಲು, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ. ಹೊಸ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಹಣಕಾಸು ಮಂಜೂರು ಮಾಡುವಂತಿಲ್ಲ. ಹೊಸದಾಗಿ ಕ್ರಿಯಾ ಯೋಜನೆ ರೂಪಿಸುವಂತಿಲ್ಲ, ಟೆಂಡರ್ ಕರೆಯುವಂತಿಲ್ಲ, ಕರೆದಿದ್ದರೆ ಅದನ್ನು ಅಂತಿಮಗೊಳಿಸುವಂತಿಲ್ಲ, ಅಂತಿಮಗೊಂಡಿದ್ದರೆ ಕಾರ್ಯಾದೇಶ ನೀಡುವಂತಿಲ್ಲ. ಚಾಲ್ತಿ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಆದರೆ, ಅಂತಹ ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ಸಚಿವ ಸಂಪುಟ ಸಭೆ ನಡೆಸಬಹುದು. ಆದರೆ, ಹೊಸ ಘೋಷಣೆ ಮಾಡುವಂತಿಲ್ಲ, ನಿರ್ಣಯ ಕೈಗೊಳ್ಳುವಂತಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ, ರಾಜಕೀಯ ಪಕ್ಷಗಳಿಗೆ ಮತ್ತು ಮತದಾರರಿಗೆ ಕೆಲವು ಮಾರ್ಗಸೂಚಿಗಳನ್ನು ನೀಡುತ್ತದೆ. ಈ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಯಾವುದೇ ಯೋಜನೆ ಪ್ರಕಟಿಸುವಂತಿಲ್ಲ. ಜನ ಪ್ರತಿನಿಧಿಗಳು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರದ ಅಧಿಕಾರಿಗಳು ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ ರಾಜಕೀಯ ನಾಯಕರ ಜೊತೆ ಗುರುತಿಸಿಕೊಳ್ಳುವಂತಿಲ್ಲ. ವರ್ಗಾವಣೆ ತುರ್ತು ಸಂದರ್ಭವಿದ್ದಾಗ ಮಾತ್ರ ಚುನಾವಣಾ ಆಯೋಗದ ಅನುಮತಿ ಪಡೆದು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಇನ್ನು ಜನಸಾಮಾನ್ಯರು ಭಾರಿ ಪ್ರಮಾಣದ ಹಣವನ್ನು ತೆಗೆದುಕೊಂಡು ಹೋಗುವಾಗ ಅದಕ್ಕೆ ಸರಿಯಾದ ದಾಖಲೆಗಳಿರಬೇಕು.
ಯಾವುದೇ ಪಕ್ಷ ಅಥವಾ ಅಭ್ಯರ್ಥಿ, ಇನ್ನೊಂದು ಪಕ್ಷ ಮತ್ತು ಅಭ್ಯರ್ಥಿಯ ನೀತಿ ನಿರೂಪಕ ವಿಷಯಗಳನ್ನು, ಅವರ ಅವಧಿಯಲ್ಲಿ ನಡೆದ ಕೆಲಸಗಳ ಬಗ್ಗೆ ಟೀಕೆ, ಟಿಪ್ಪಣಿ ಮಾಡಬಹುದು. ವ್ಯಕ್ತಿಗತ ಟೀಕೆ, ಸಮಾಜದ ವಿವಿಧ ಜಾತಿ-ವರ್ಗಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಬಾರದು. ವೈಯಕ್ತಿಕ ಹಾಗೂ ಜಾತಿ ನಿಂದನೆ ನೀತಿ ಸಂಹಿತೆಯ ಉಲ್ಲಂಘನೆ ಆಗಲಿದೆ.
ಇನ್ನು ಬರ, ಪ್ರವಾಹ ಪರಿಸ್ಥಿತಿ ಪರಿಶೀಲನೆ, ಪರಿಹಾರ ಬಿಡುಗಡೆ ಮತ್ತು ಕುಡಿಯುವ ನೀರು ಪೂರೈಕೆ, ಗೋಶಾಲೆಗಳನ್ನು ತೆರೆಯಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ, ಇದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಸಚಿವ ಸಂಪುಟ ಸಭೆ ನಡೆಸಬಹುದು. ಆದರೆ, ಹೊಸ ಘೋಷಣೆ ಮಾಡುವಂತಿಲ್ಲ, ನಿರ್ಣಯ ಕೈಗೊಳ್ಳುವಂತಿಲ್ಲ. ಸಚಿವರು ಮತ್ತು ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಗಳು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹಗಳನ್ನು ಬಳಸುವಂತಿಲ್ಲ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳ ಸಭೆ ಕರೆಯುವಂತಿಲ್ಲ. ಭೇಟಿ ಮಾಡುವಂತಿಲ್ಲ. ವಿಶೇಷ ಸಂದರ್ಭಗಳಿದ್ದರೆ ಅಂತಹ ಅಧಿಕಾರಿಗಳು ಸಹ ಸಚಿವರು, ಶಾಸಕರನ್ನು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದುಕೊಳ್ಳಬೇಕು.