ಬೆಂಗಳೂರು: "ಯಡಿಯೂರಪ್ಪನವರು ಮತ್ತು ಅಮಿತ್ ಶಾರ ನಡುವೆ ರಾಜಕಾರಣದ ಹೊರತು ಬೇರೇನೂ ಚರ್ಚೆ ನಡೆಯುವುದಿಲ್ಲ. ಇಂದೂ ಕೂಡ ಅದೇ ರೀತಿಯ ಚರ್ಚೆಯಾಯಿತು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಾರದು, ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಯಿತು" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬಿಎಸ್ವೈ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಹಾರ ಕೂಟದ ನಂಚರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಇಂದು ಯಡಿಯೂರಪ್ಪನವರ ಆಹ್ವಾನದ ಮೇರೆಗೆ ಉಪಹಾರಕ್ಕೆ ಬಂದಿದ್ದರು. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಬಂದರು. ಉಪಹಾರದ ಸಂದರ್ಭದಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಯಿತು. ರಾಜ್ಯದಲ್ಲಿ ಚುನಾವಣೆ ಎದುರಿಸಬೇಕಿದೆ, ಅದಕ್ಕಾಗಿ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಯಡಿಯೂರಪ್ಪ ಎಲ್ಲ ನಾಯಕರೂ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಬಳಿಕ ಪಕ್ಷದಲ್ಲಿ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದಾರೆ ಎಂದೆಲ್ಲಾ ಸುದ್ದಿ ಹರಡುತ್ತಿತ್ತು. ಆದರೆ ಅದು ತಪ್ಪು ಕಲ್ಪನೆ, ಪಕ್ಷದಲ್ಲಿ ಅವರನ್ನು ಕಡೆಗಣಿಸಿಲ್ಲ ಎಂದು ಹಲವು ಬಾರಿ ಬಿಎಸ್ವೈ ಖುದ್ದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಸಿಎಂ ಆಗಿದ್ದಾಗ ಹೇಗಿದ್ದರೋ ಈಗಲೂ ಅದೇ ಬದ್ದತೆಯಿಂದ ಯಡಿಯೂರಪ್ಪ ಇದ್ದಾರೆ. ರಾಜಕಾರಣದಲ್ಲಿ ಎಲ್ಲವೂ ಸಹಜ. ಹಿಂದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕೆಲವರು ಪಕ್ಷ ತೊರೆಯುವ ಊಹಾಪೋಹದ ಚರ್ಚೆ ನಡೆಸುತ್ತಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.