ಬೆಂಗಳೂರು :ರಾಜ್ಯದಲ್ಲಿ ನಾಲ್ಕು ದಿಕ್ಕಿನಿಂದ ಆರಂಭಗೊಂಡಿರುವ ರಥಯಾತ್ರೆ ಅಂತಿಮ ಹಂತ ತಲುಪಿದ್ದು, ಮಾರ್ಚ್ 25 ರಂದು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಮಾರೋಪ ಭಾಷಣ ಮಾಡಲಿದ್ದು, ಕಾರ್ಯಕ್ರಮಕ್ಕೆ 10 ಲಕ್ಷ ಜನರನ್ನು ಸೇರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ 15 ದಿನ ಕಳೆದಿದೆ. ನಾಲ್ಕು ತಂಡಗಳಲ್ಲಿ ನಡೆಯುತ್ತಿರುವ ಯಾತ್ರೆಗಳು ಯಾವುದೇ ತೊಂದರೆಯಾಗದೆ ಯಶಸ್ವಿಯಾಗಿ ನಡೆಯುತ್ತಿದೆ. 4 ಯಾತ್ರೆಗಳು 151 ವಿಧಾನಸಭಾ ಕ್ಷೇತ್ರ ತಲುಪಿದೆ. 60 ಲಕ್ಷ ಜನ ಕಾರ್ಯಕರ್ತರು ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಥಯಾತ್ರೆಯಲ್ಲಿ ನಮ್ಮೆಲ್ಲಾ ಶಾಸಕರು, ಸಂಸದರು ಭಾಗಿಯಾಗಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು, ರಥದ ಉಸ್ತುವಾರಿಗಳು ಸೇರಿ 45 ಜನ ಭಾಗಿಯಾಗಿದ್ದಾರೆ. 110 ರೋಡ್ ಶೋ, 41 ಬಹಿರಂಗ ಸಭೆ ಮಾಡಲಾಗಿದೆ. ವಿಜಯಸಂಕಲ್ಪ ಯಶಸ್ವಿ ಯಾತ್ರೆಗೆ ಕಾರಣರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕೋಲಾರ, ಶಿಡ್ಲಘಟ್ಟ, ಗೌರಿಬಿದನೂರು ಕಡೆ 10-15 ಸಾವಿರ ಜನ ಭಾಗಿಯಾಗಿದ್ದಾರೆ. ಬಸವಕಲ್ಯಾಣ ಕಾರ್ಯಕ್ರಮದಲ್ಲಿ 45 ಸಾವಿರ ಜನರು ಭಾಗಿಯಾಗಿದ್ದರೆ ಎಂದು ಹೇಳಿದರು.
ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ :ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷದ ಸಾಮರ್ಥ್ಯ ಕಡಿಮೆ ಇದೆ ಎಂದು ಜನ ಭಾವಿಸಿದ್ದರು. ಆದರೆ ಅಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆದು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಲ್ಯಾಣ ಕರ್ನಾಟಕದಲ್ಲಿ 40 ಸಾವಿರ ಜನ ಮೇಲ್ಪಟ್ಟು ಭಾಗಿಯಾಗಿದ್ದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿಯಾಗಿ ವಿಜಯಸಂಕಲ್ಪ ಯಾತ್ರೆ ನಡೆದಿದೆ. ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಕರ್ನಾಟಕದಲ್ಲಿ ಯಾತ್ರೆ ಆರಂಭಿಸಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮಾರ್ಚ್ 21ರವರೆಗೂ ಯಾತ್ರೆ ನಡೆಯಲಿದೆ. ಸಂಪೂರ್ಣ ಬಹುಮತ ಬರಲು ವಿಜಯದ ತಳಹದಿ ಹಾಕಿಕೊಟ್ಟಿದ್ದು ವಿಜಯಸಂಕಲ್ಪ ರಥಯಾತ್ರೆ ಎಂದರು.
ದಾವಣಗೆರೆಯಲ್ಲಿ ವಿಜಯಸಂಕಲ್ಪ ರಥಯಾತ್ರೆ ಸಮಾರೋಪ : ದಾವಣಗೆರೆಯಲ್ಲಿ ಮಾ.25ರಂದು ಬೃಹತ್ ಸಮಾವೇಶ ನಡೆಯಲಿದೆ. ಮಾರ್ಚ್ 24ರಂದು ದಾವಣಗೆರೆ ಸುತ್ತಮುತ್ತಲಿನ ನಾಲ್ಕು ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. 25ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಭಾಷಣ ಮಾಡಲಿದ್ದಾರೆ. ಇದುವರೆಗೂ ಸೇರಿರದಷ್ಟು ಜನರನ್ನು ಸೇರಿಸುವ ಗುರಿ ಇದೆ. ಅಂದಾಜು ಹತ್ತು ಲಕ್ಷ ಜನರನ್ನು ಸೇರಿಸುವ ಗುರಿ ಇದೆ. ಅದರ ಬಗ್ಗೆ ಒಂದು ಸಭೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.